ಸನಾತನ ಧರ್ಮ ಮತ್ತು ಸಂಕ್ರಮಣ

 ಈ ಭರತ ಭೂಮಿಯಲ್ಲಿ ಸಹಸ್ರಾರು ವರ್ಷಗಳಿಂದ ಅನೇಕ ಮಹಾನುಭಾವರು ಸನಾತನ ಧರ್ಮದ ಸಂರಕ್ಷಣೆಯನ್ನು ಮಾಡಿದ್ದಾರೆ. ಅವರು ತಮ್ಮ ಸಾಧನೆಯಿಂದ ಅನೇಕ ಅನುಯಾಯಿಗಳನ್ನು ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲೂ ಅಂಥವರನ್ನು ನಾವು ಕಾಣುತ್ತೇವೆ.  ಎಲ್ಲ ಕಾಲಕ್ಕೂ ಆಧಾರವಾದ ಒಂದೇ ಒಂದು ಸಂಸ್ಕೃತಿ ವೈದಿಕ ಸಂಸ್ಕೃತಿ. ಕಾಲಕಾಲಕ್ಕೆ ವಿಭಿನ್ನ ಆಚಾರಗಳು ವಿಚಾರಗಳು ಅಭಿವ್ಯಕ್ತವಾದರೂ, ಆಯಾ ಆಚಾರ ವಿಚಾರಗಳನ್ನು ಒಪ್ಪಿದವರು ಅವುಗಳನ್ನು ಮುಂದುವರಿಸಿದರು. ಮತ್ತೊಂದು ಆಚಾರ ವಿಚಾರ ಸರಿ ಎನಿಸಿದವರು ಅದನ್ನು ಅನುಸರಿಸಿದರು. ಇದು ವ್ಯಕ್ತಿಗತವಾಗದೇ ಒಂದು ರಾಜ್ಯ, ಒಂದು ಪ್ರದೇಶ, ಒಂದು ಜನಾಂಗ ದಲ್ಲೂ ವ್ಯಾಪಕವಾಗಿ ಕಾಣುತ್ತದೆ. ಎಷ್ಟೋ ರಾಜರ ಆಳ್ವಿಕೆಯಲ್ಲಿ,ಬೌದ್ಧ ಜೈನ ಮೊದಲಾದ ಅವೈದಿಕ ಧರ್ಮದ ವಿಕಾಸವಾದದ್ದನ್ನು ಇತಿಹಾಸ ತಿಳಿಸುತ್ತದೆ.  ಸಾಮಾಜಿಕವಾಗಿ, ಧಾರ್ಮಿಕ ವಾಗಿ ಎಷ್ಟೋ ಸಂಕ್ರಮಣಗಳು ಆಗ ನಡೆದಿವೆ. ಹಾಗೆಯೇ ಇನ್ನೆಷ್ಟೋ ರಾಜರ ಆಳ್ವಿಕೆಯಲ್ಲಿ  ಶೈವ ವೈಷ್ಣವ, ಶಾಕ್ತ, ವೀರಶೈವ, ಮೊದಲಾದ ಧರ್ಮಗಳ ವಿಕಾಸವಾಗಿ,ಆಗಲೂ ನಡೆದ  ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ, ಬದಲಾವಣೆಗಳನ್ನು ಐತಿಹಾಸಿಕವಾಗಿ ಗುರುತಿಸಬಹುದು. ಯಾವುದು ಮೊದಲು ಯಾವುದು ನಂತರ ಎಂದು ನಿರ್ಣಯಿಸುವುದು ಅಸಾಧ್ಯ. ಜೈನ, ಬೌದ್ಧ ಸಂಪ್ರದಾಯಗಳು ವೈದಿಕ ಧರ್ಮಗಳನ್ನು ಹತ್ತಿಕ್ಕಿ ಬೆಳೆದವು. ಜೈನ, ಬೌದ್ಧ, ಧರ್ಮಗಳನ್ನು ಹತ್ತಿಕ್ಕಿ ವೈದಿಕ ಮತಗಳು ಬಂದವು. ಅನಂತರ ವೈದಿಕ ಧರ್ಮಗಳಲ್ಲಿ, ಒಂದು ಮತ್ತೊಂದನ್ನು ಹತ್ತಿಕ್ಕಿ ವಿಭಿನ್ನ ಕಾಲದಲ್ಲಿ ಬೆಳೆದು ಬಂದವು. ಇಷ್ಟಕ್ಕೇ ನಿಲ್ಲದೇ ಪ್ರತಿಯೊಂದು ಧರ್ಮದಲ್ಲೂ ಹತ್ತು ಹಲವು ಪಂಗಡಗಳು, ಅವರ ಆಚಾರ ವಿಚಾರಗಳಲ್ಲಿ ವ್ಯತ್ಯಾಸ, ಸಹಜವಾಗಿದೆ. ಇಂತಹ  ಸಂಕ್ರಮಣಗಳು ಇಂದಿಗೂ ನಡೆದಿವೆ. ಇದೇ ಹಿಂದೂಧರ್ಮದ ವಿವಿಧತೆ. 

ಇಂತಹ ನಮ್ಮ ದೇಶ ಪಾಶ್ಚಾತ್ಯ ಧರ್ಮಗಳನ್ನೂ ಅನಿವಾರ್ಯ ವಾಗಿಯೋ ಔದಾರ್ಯದಿಂದಲೋ ಸ್ವಾಗತಿಸಿತು. ರಾಜಕೀಯವಾಗಿ ನಮ್ಮ ಮೇಲೆ ಆಕ್ರಮಣ ಮಾಡಿ ದ ಪಾಶ್ಚಾತ್ಯರು, ವಿದೇಶಿಗಳು ತಮ್ಮ ಧರ್ಮದವಿಸ್ತಾರಕ್ಕಾಗಿ ಅಧಿಕಾರಬಯಸಿ ಬಂದರು. ತಮ್ಮ ಧರ್ಮವನ್ನೂ ವಿಸ್ತರಿಸಿದರು. ಬರೀ ವಿಸ್ತರಿಸಿದ್ದರೆ ಆಕ್ಷೇಪವಿರಲಿಲ್ಲ ಆಕ್ರಮಣಮಾಡಿದರು ಎಂಬುದು ಆಕ್ಷೇಪಣೀಯ. ಅದಕ್ಕಾಗಿ ಇಂದಿಗೂ ಅದರ ವಿರುದ್ಧ ಪ್ರತಭಟನೆ, ಆಕ್ರೋಶ ಗಳು. 

ಇಲ್ಲಿ ಮುಖ್ಯ ವಾಗಿ ಗಮನಿಸಬೇಕಾದ್ದು ಎರಡು ಅಂಶ

೧. ಭಾರತೀಯ ಧರ್ಮಗಳಲ್ಲಿ ಪರಸ್ಪರ ಸಂಕ್ರಮಣ ಮತ್ತು ಏಳು ಬೀಳುಗಳು ನಮ್ಮಲ್ಲಿಯೇ ಆದ ಹೊಂದಾಣಿಕೆಗಳು. ಎಲ್ಲರನ್ನೂ ಏಕಸೂತ್ರದಲ್ಲಿ ಹಿಡಿದಿಡುವ ಸನಾತನ ಹಿಂದೂ ಸಂಸ್ಕೃತಿಗೆ ಚ್ಯುತಿ ಇಲ್ಲ. ಏನೇ ಆದರೂ ಪರಸ್ಪರರ ಆಚಾರ ವಿಚಾರಗಳನ್ನು ಗೌರವಿಸಬೇಕು. 

೨.  ಆದರೆ ವೈದೇಶಿಕ ಧರ್ಮಗಳು ನಮ್ಮಲ್ಲಿಯ ಹಿಂದೂ ಸಂಸ್ಕೃತಿಯನ್ನು ನಾಶಪಡಿಸುವ ಮೂಲಕ ಆಕ್ರಮಣಕಾರಿ ಯಾದ ಕಾರಣ ಅದನ್ನು ಸಹಿಸುವುದು ಕಷ್ಟ ಸಾಧ್ಯ.

ಈ ಅಂಶಗಳ ಆಧಾರದಲ್ಲಿ ವಿಚಾರ ಮಾಡಿದಾಗ,

    ಹಿಂದೂ ಸಂಸ್ಕೃತಿಯ   ಧಾರ್ಮಿಕ  ಸಾಮಾಜಿಕ ವ್ಯವಸ್ಥೆಗಳಲ್ಲಿ   ಆದ ಸಂಕ್ರಮಣಗಳು ಸ್ವಾಭಾವಿಕ. ಅವುಗಳ ಕುರಿತು ತಗಾದೆ ಮಾಡುವುದಾದರೆ ಯಾವುದಕ್ಕೂ ನಿರ್ದಿಷ್ಟ ಪ್ರಮಾಣದ ನ್ಯಾಯ ಒದಗಲಾರದು. ಇದ್ದದ್ದನ್ನು  ಗೌರವಿಸಿ ಮುಂದುವರಿದರೆ ಸಾಮಾಜ ಶಾಂತವಾಗಿರುವುದು. 

ಯಾವನೋ ಅವಿವೇಕಿಯಿಂದ ಪ್ರಚೋದಿತರಾಗಿ  ಹುಂಬತನದಿಂದ ಜಗಳಕ್ಕಿಳಿದರೆ ಸಿಗುವುದು ಶೂನ್ಯ. ನಮ್ಮನ್ನು ರಾಜಕೀಯ ದಾಳ ಮಾಡಿಕೊಂಡವರಿಗೆ ಲಾಭ. 

ಆದ್ದರಿಂದ ಅರಿತು ಒಂದಾಗಿ ಹೊಂದಾಣಿಕೆಯಿಂದ ಬಾಳಿದರೆ ಸುಖ. ಇಲ್ಲದಿದ್ದರೆ ಸಂತಾಪ.

Popular posts from this blog

ಬ್ರಾಹ್ಮಣ್ಯ ಮತ್ತು ಭಾರತ