శ్రీ ఆంజనేయస్వామి వారి జన్మస్థలం తిరుమలలోని అంజనాద్రి

 

[1]ಶ್ರೀ ಆಂಜನೇಯಸ್ವಾಮಿ ವಾರಿ ಜನ್ಮಸ್ಥಲಂ

ತಿರುಮಲಲೋನಿ ಅಂಜನಾದ್ರಿ (AJTA)

 

ಇದು ರಾಮನವಮಿಯ ದಿನ ತಿರುಮಲ ತಿರುಪತಿ ದೇವಸ್ಥಾನ[2] (TTD) ಬಿಡುಗಡೆ ಮಾಡಿದ ಕಿರು ಪುಸ್ತಕ. ಹನುಮಂತ ಹುಟ್ಟಿದ ಸ್ಥಲ ಅಂಜನಾದ್ರಿ ತಿರುಮಲೆಯಲ್ಲಿದೆ ಎಂಬುದಕ್ಕೆ  ಐತಿಹಾಸಿಕ ಪುರಾವೆಗಳನ್ನು ? ಸಂಗ್ರಹಿಸಿ ಮುದ್ರಿಸಿದ್ದು.

 

AJTA ಪುಟ ೨. ಮೊದಲ ಪ್ಯಾರಾ

 

೧. "హనుమంతుడు సర్వదేవతా స్వరూపుడు" 

(ಹನುಮಂತನು ಸರ್ವದೇವತಾ ಸ್ವರೂಪ ) ಎಂಬ ಆರಂಭದ ವಾಕ್ಯವೇ ವಿಲಕ್ಷಣವಾಗಿದೆ.

 

ಹನುಮಂತನು ಸರ್ವದೇವತಾಸ್ವರೂಪನಾಗಿದ್ದರೆ, ಅವನು ರಾಮಸ್ವರೂಪನೂ ಹೌದು.ಅವನು ರಾಮನ ದಾಸ ಎಂದು ಪ್ರಸಿದ್ಧನಾಗಿದ್ದು ಹೇಗೆ?   ಇಂದಿಗೂ ಕಿಂಪುರುಷ ಖಂಡದಲ್ಲಿ ರಾಮನ ಭಜನೆ ಯಾಕೆ ಮಾಡುತ್ತಿರುವನೋ ? ಎಲ್ಲವೂ ಗೊಂದಲ.

 

೨. AJTA ಪುಟ ೨. ಎರಡನೆಯ ಪ್ಯಾರಾ

 

"ఇలా అభయాంజనేయునిగా ఆనందాంజనేయునిగా..."

ಎಂದು ಆಂಜನೇಯ ಅಭಯ-ಆಂಜನೇಯನಾಗಿ, ಆನಂದಾಂಜನೇಯನಾಗಿ....  ವರ್ಣಿಸಲಾಗಿದೆ. ಇದಕ್ಕೆ ಕೊಟ್ಟ ಕಾರಣಗಳು

೧. ಭಯಗ್ರಸ್ತನಾದ ಸುಗ್ರೀವನಿಗೆ ಅಭಯವಿತ್ತು, ಶ್ರೀರಾಮನ ಜೊತೆ ಮೈತ್ರಿಯನ್ನು ಮಾಡಿಸಿದನಾಗಿ  ಅಭಯಾಂಜನೇಯನೆನಿಸಿದ.

೨. ಮಹಾ ದು:ಖದಲ್ಲಿ ಇದ್ದ ಸೀತಾಮಾತೆಗೆ ಶ್ರೀರಾಮನ ಸಂದೇಶವನ್ನು ತಲುಪಿಸಿ ಆಕೆಯ  ಪ್ರಾಣಗಳನ್ನು ರಕ್ಷಿಸಿ, ಆ ಮಾತೆಯ ಆನಂದಕ್ಕೆ ಕಾರಣನಾದ.  ಆದ್ದರಿಂದ ಅವನು ಆನಂದಾಂಜನೇಯ ಎಂದು ನಿರೂಪಿಸಲಾಗಿದೆ.

 

 ಇಲ್ಲಿ ಗಮನಿಸಬೇಕಾದ ಅಂಶ ಇಷ್ಟೇ, ಸುಗ್ರೀವನಿಗೆ ಅಭಯವನ್ನಿತ್ತದ್ದು ಶ್ರೀರಾಮನೇ ಹೊರತು ಹನುಮಂತದೇವರಲ್ಲ. ಹನುಮಂತದೇವರು ಉತ್ತಮ ಮಂತ್ರಿಯಾಗಿ ಸುಗ್ರೀವನಿಗೆ ಉತ್ತಮ ಸಲಹೆಯನ್ನು ನೀಡಿ,   ಶ್ರೀರಾಮನ ಮನವೊಲಿಸಿ ಆ ಪುರುಷೋತ್ತಮನ ಅಭಯ ಸುಗ್ರೀವನಿಗೆ  ದೊರೆಯುವಂತೆ ಮಾಡಿದರು ಹನುಮಂತದೇವರು. ಆದರೆ, ಶ್ರೀರಾಮದೇವರ ಪರಮ ಭಕ್ತರಾದ ಹನುಮಂತದೇವರು ನಮಗೆ ಬರುವ ಕಷ್ಟಗಳನ್ನು ನಾಶಮಾಡಿ ನಮ್ಮನ್ನು ಪೊರೆಯುವ ಮಹಿಮೆ ಉಳ್ಳವರು ಆದ್ದರಿಂದ ಅವರು ಅಭಯಾಂಜನೇಯ ಎನಿಸುವರು.  ಎಂಬ ವಿವರಣೆ ಸೂಕ್ತವಾಗಬಲ್ಲದು.

ಹಾಗೆಯೇ "ಮಹಾದು:ಖದಲ್ಲಿದ್ದ ಸೀತಾಮಾತೆಗೆ, ರಾಮನ ಸಂದೇಶ ತಲುಪಿಸಿದರು ಹನುಮಂತದೇವರು"  ಎಂಬುದು ಸಾಮಾನ್ಯಜನರಿಗೆ ಸಂದೇಹ ಹುಟ್ಟಿಸುವ ಮಾತು. ಕಾರಣ, ಅಲ್ಲಿರುವುದು ಸೀತೆಯಂತಿರುವ ವೇದವತಿ ಹೊರತು ಸೀತಾಮಾತೆಯಲ್ಲ ಎಂಬುದು ಶ್ರೀವೇಂಕಟೇಶಮಾಹಾತ್ಮ್ಯವನ್ನು ಜಾಲಾಡಿದ TTD ಗೆ ತಿಳಿಯಬೇಕಲ್ಲವೇ ? ವಿಮರ್ಶಕರಾದವರು ಇಂತಹ ಸೂಕ್ಷ್ಮಗಳನ್ನು ಗಮನಿಸಬೇಕು. ಜನರನ್ನು ಕೇವಲ ಭಾವನಾತ್ಮಕವಾಗಿ ವಂಚಿಸುವುದು ಸರಿಯಲ್ಲ. ಹಾಗೆ ಮಾಡಿದಲ್ಲಿ ಅದು ಸಿನೇಮಾ ಕಥೆಯೋ ಚಂದಮಾಮಾ ಕಥೆಯೋ ಆಗುವುದು ಹೊರತು ವಾಸ್ತವದಲ್ಲಿ ಪುರಾಣ ಅಥವಾ ಇತಿಹಾಸ ಆಗದು.

ಅಲ್ಲದೇ ಯಾವುದೇ ಪುರಾಣದ ಮಾತನ್ನು, ಹಿಂದು ಮುಂದು  ಇರುವ ಮಾತುಗಳನ್ನು ನೋಡಿ ಆಲೋಚಿಸಿ  ಅರ್ಥಮಾಡಿಕೊಳ್ಳಬೇಕು.  ಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಉಲ್ಲೇಖ ಮಾಡುವುದರಿಂದ ಅನರ್ಥವೇ ಹೊರತು ಅದು ಸತ್ಯಸಂಗತಿಯನ್ನುತಿಳಿಸಲಾರದು.

 

ಅಂಜನೆ ಯಾರು? ಅವಳಲ್ಲಿ ಹನುಮಂತ ಜನಿಸಿದ್ದು ಹೇಗೆ ?

 

TTD  ಗೆ ಎಷ್ಟು ಬೇಕೋ ಅಷ್ಟನ್ನು ಅಲ್ಲಲ್ಲಿ ಸಿಕ್ಕ ತಥಾಕಥಿತ ಪುರಾಣಗಳಿಂದ ಆರಿಸಿ ಉಲ್ಲೇಖ ಮಾಡಿದೆ. ಅವುಗಳ ಸತ್ಯಾಸತ್ಯತೆಯ ಕುರಿತು, ಯುಕ್ತಾಯುಕ್ತತೆಯ ಕುರಿತು ಚಿಂತನೆ ಮಾಡುವಲ್ಲಿ ವಿಫಲವಾಗಿದೆ.  ಈಗ TTD ಉಲ್ಲೇಖಿಸಿದ ಒಂದೊಂದೇ ಪುರಾಣಗಳ, ಇತಿಹಾಸಗಳ ಕಥೆಯನ್ನು ನೋಡೋಣ, ಮತ್ತು ಅವುಗಳ ಯುಕ್ತಾಯುಕ್ತತೆಯ ಕುರಿತು ವಿಚಾರ ಮಾಡೋಣ.  

 

೧. ಒಂದು  ರಾಮಾಯಣ ಹೇಳುವಂತೆ[3]

ಪಾರ್ವತೀ- ಪರಮೇಶ್ವರರು ಕೈಲಾಸ ಪರ್ವತದಲ್ಲಿ ಕ್ರೀಡಿಸುತ್ತಿದ್ದಾಗ ಒಂದು ವಾನರಜೋಡಿ ಅವರ ಕಣ್ಣಿಗೆ ಬಿತ್ತು. ಪಾರ್ವತಿ ಶಿವನೊಂದಿಗೆ ಸೇರಿ ಗರ್ಭವನ್ನು ಧರಿಸಿ ಅದನ್ನು ತಾಳಲಾಗದೇ ಶಿವನನ್ನು ಪ್ರಾರ್ಥಿಸಿದಳು. ಆಗ ಶಿವನು ಅದನ್ನು ಪಾರ್ವತಿಯ ನಾಭಿಯಿಂದ ಹೊರ ಬೀಳುವಂತೆ ಮಾಡಿದ. ಆ ವೀರ್ಯ ಭೂಮಿಯ ಮೇಲೆ ಬಿದ್ದಾಗ, ಭೂದೇವಿ ಅದನ್ನು ತಾಳಲಾರದೇ ಕಂಗೆಟ್ಟಾಗ, ಅದೇ ಸಮಯದಲ್ಲಿ, ಗೌತಮರ ಮಗಳಾದ ಅಂಜನೆಯು ಪುತ್ರಾಪೇಕ್ಷೆಯಿಂದ ತಪಸ್ಸನ್ನು ಮಾಡುತ್ತಿದ್ದಳು. ಆಗ ವಾಯುದೇವ ಆಕೆಯ ರೂಪಕ್ಕೆ ಮರುಳಾಗಿ ಆ ಭೂಮಿಯ ಮೇಲೆಬಿದ್ದ ಶಿವನ ಶಕ್ತಿಯನ್ನು ಅಂಜನೆಯ ಅಂಗೈಯಲ್ಲಿಟ್ಟ. ಆಕೆ ಅದನ್ನು ನುಂಗಿದಳು. ಅನಂತರ ನವ ಮಾಸಗಳ ಗರ್ಭ ಪೂರ್ಣವಾದಾಗ, ಸಕಲಾಭರಣ ಭೂಷಿತನಾದ ಒಬ್ಬ ವಟು ಜನಿಸಿದ, ಬಳಿಕ ಆ ಮಗು ಫಲಾಪೇಕ್ಷೆಯಿಂದ ಸೂರ್ಯನನ್ನೇ ನುಂಗಲು ಆಕಾಶಕ್ಕೆ ಹಾರಿತು. ಸೂರ್ಯನನ್ನೇ ನುಂಗ ಹೊರಟ ಬಾಲಕನನ್ನು ತಡೆಯಲು ಇಂದ್ರನು ವಜ್ರಾಯುಧವನ್ನು ಪ್ರಯೋಗಿಸಿದ, ವಜ್ರಾಯುಧದ ಹೊಡೆತದಿಂದ ಆ ಮಗು ಮೂರ್ಛೆಗೊಂಡಾಗ, ದೇವತೆಗಳೆಲ್ಲ ಅಲ್ಲಿ ಸೇರಿ ಅವನಿಗೆ ಅನೇಕ ವರಗಳನ್ನಿತ್ತು ಸಲಹಿದರು. ಅನಂತರ ಸೂರ್ಯನಲ್ಲೇ ತನ್ನ ಅಧ್ಯಯನವನ್ನು ಪೂರೈಸಿ,ಸುಗ್ರೀವನ ಮಂತ್ರಿಯಾದ.. ಇತ್ಯಾದಿ. (ತತ್ತ್ವಸಂ. ರಾ. ಕಿ. ೧೨.೧೩)

 

೨. ವಾಲ್ಮೀಕಿ ರಾಮಾಯಣದಂತೆ[4]

ಜಾಂಬವಂತನು ಹನುಮಂತನಿಗೆ ಅವನ ಜನ್ಮದ ರಹಸ್ಯವನ್ನೂ ಅವನ ಬಲ ಪರಾಕ್ರಮವನ್ನೂ ಹೇಳುತ್ತಾನೆ

 ಅಪ್ಸರಸೆಯಲ್ಲಿ ಶ್ರೇಷ್ಠಳಾದ ಪುಂಜಿಕಾಸ್ಥಲಾ ಎಂಬುವಳೇ ಜನ್ಮಾಂತರದಲ್ಲಿ ಶಾಪದಿಂದ ಅಂಜನಾ ಎಂಬ ಹೆಸರಿನಿಂದ ಕುಂಜರನೆಂಬ ವಾನರಶ್ರೇಷ್ಠನಿಗೆ ಮಗಳಾಗಿ ಜನಿಸಿದಳು. ಮುಂದೆ ಕೇಸರಿಯ ಪತ್ನಿಯಾದಳು ಕಾಮರೂಪಿಣಿಯಾದ ಅವಳು ಒಮ್ಮೆ  ಸರ್ವಾಭರಣ ಭೂಷಿತೆಯಾಗಿ ಸುಂದರ ಉಡುಗೆ ಉಟ್ಟು ಮಾನುಷರೂಪತಾಳಿ ಪರ್ವತ ಶಿಖರದಲ್ಲಿ ಸಂಚರಿಸುತ್ತಿದ್ದಳು. ಆ ಸಂದರ್ಭದಲ್ಲಿ ಅವಳ ರೂಪ ಯೌವ್ವನಗಳಿಗೆ ಮನಸೋತ ವಾಯುವು ಅವಳನ್ನು ಗಟ್ಟಿಯಾಗಿ ಆಲಿಂಗಿಸಿಯೇ ಬಿಟ್ಟ. ಆಗ ಅಂಜನೆಯು ಭಯ- ಗೊಂಡು ಏಕಪತ್ನಿವ್ರತದಲ್ಲಿರುವ ನನ್ನನ್ನು ಯಾರದು ವಿಚಲಿತಗೊಳಿಸುತ್ತಿರುವುದು? ಎಂದಳು. ಆಗ ವಾಯುವು ಅವಳನ್ನು ಸಮಾಧಾನ ಪಡಿಸಿ, ಯಶೋವಂತಳಾದ ನಿನ್ನನ್ನು ನಾನು ಆಲಿಂಗಿಸಿಕೊಂಡು ಮನಸಾ ನಿನ್ನನ್ನು ಪ್ರವೇಶಿಸಿದ್ದೇನೆ. ನಿನಗೆ ಹುಟ್ಟುವ ಮಗನು ಬುದ್ಧಿಸಂಪನ್ನನು, ಮಹಾ ತೇಜಸ್ವಿಯೂ, ಓಜಸ್ವಿಯೂ, ಎಲ್ಲದರಲ್ಲೂ ನನಗೆ ಸಮಾನನೂ  ಆಗಿರುವನು ಎಂದು ಹರಸಲು  ಆ ನಿನ್ನ ತಾಯಿ ಅಂಜನಾ ದೇವಿ ಸಮಾಧಾನ ಗೊಂಡಳು. ಮುಂದೆ ವಾಯುದೇವನ ಅನುಗ್ರಹದಿಂದ ಅದ್ಭುತ ಮಗುವನ್ನು ಪಡೆದಳು. ಬಾಲಕನಾಗಿದ್ದಾಗಲೇ ಸೂರ್ಯನನ್ನು ನುಂಗಲು ಆಕಾಶಕ್ಕೆ ಜಿಗಿದ ನೀನು ಮುನ್ನೂರು ಯೋಜನಗಳಷ್ಟು ದೂರಕ್ಕೆ ಹಾರಿದೆ.  ಸೂರ್ಯನ ಕಡೆ ವೇಗವಾಗಿ ಧಾವಿಸುವ ನಿನ್ನ ಸಾಹಸ ಕಂಡು ಕೋಪಗೊಂಡ ಸೂರ್ಯ ನಿನ್ನ ಮೇಲೆ ವಜ್ರಾಯುಧವನ್ನೆಸೆದ,ಅದರ ಹೊಡೆತಕ್ಕೆ ನಿನ್ನ ಎಡಭಾಗದ ಹನುವು ಘಾಸಿಯಾಗಲು, ನಿನ್ನನ್ನು ಹನುಮಂತ ಎಂದು ಜನ ಕರೆದರು. ನಿನ್ನನ್ನು ವಜ್ರಾಯುಧದಿಂದ ಘಾಸಿಗುಳಿಸಲು, ಕೋಪಗೊಂಡ ನಿನ್ನ ತಂದೆ ವಾಯುದೇವನು ಮೂರು ಲೋಕಗಳಲ್ಲೇ ತನ್ನ ಸಂಚಾರವನ್ನು ನಿಲ್ಲಿಸಿದ. ಗಾಬರಿಯಾದ ದೇವತೆಗಳು ವಾಯುವನ್ನು ಪ್ರಸನ್ನಗೊಳಿಸಿದರು. ಬ್ರಹ್ಮದೇವರು ನಿನಗೆ ಯುದ್ಧದಲ್ಲಿ ಯಾವುದೇ ಅಸ್ತ್ರಾಘಾತದಿಂದ ಮರಣವಾಗದಿರಲೆಂದೂ, ಇಂದ್ರನು ಇಚ್ಛಾಮರಣಿಯಾಗುವಂತೆಯೂ ವರವಿತ್ತರು. ಇತ್ಯಾದಿ.....

 

ಹನುಮಂತನು ತನ್ನನ್ನು ಪರಿಚಯಿಸಿಕೊಂಡ ಕ್ರಮ (ಸುಂದರ ಕಾಂಡ)

 

[5]ವೈದೇಹಿ! ಮಾಲ್ಯವಂತವು ಪರ್ವತಗಳಲ್ಲಿಯೇ ಶ್ರೇಷ್ಠವಾದ ಪರ್ವತ. ಕೇಸರೀ ಎಂಬ ಕಪೀಶ್ವರನು ಅಲ್ಲಿಂದ ಗೋಕರ್ಣಪರ್ವತಕ್ಕೆ ಹೋದನು. ಪುಣ್ಯಪ್ರದವಾದ ಗೋಕರ್ಣಕ್ಷೇತ್ರದಲ್ಲಿ ಯಾತ್ರಾರ್ಥಿ- ಗಳಿಗೆ ತೊಂದರೆಯನ್ನುಂಟುಮಾಡುತ್ತಿದ್ದ ಶಂಬಸಾದನನೆಂಬ ರಾಕ್ಷಸನನ್ನು ಸಂಹರಿಸುವಂತೆ ಬ್ರಹ೯ರ್ಜಿಗಳು ಕಪಿಶ್ರೇಷ್ಠನಾದ ಆ ನನ್ನ ತಂದೆಗೆ ಆಜ್ಞೆಮಾಡಿದರು. ಅವರ ಆಜ್ಞೆಯಂತೆ ನನ್ನ ತಂದೆಯು ಆ ರಾಕ್ಷಸನನ್ನು ಸಂಹರಿಸಿದನು. ಅಂತಹ ಮಹಾಪರಾಕ್ರಮಿಯಾದ ಕೇಸರಿಯ ಕ್ಷೇತ್ರದಲ್ಲಿ (ಅವನ ಪತ್ನಿಯಾದ ಅಂಜನಾದೇವಿಯಲ್ಲಿ) ನಾನು ವಾಯುವಿನಿಂದ ಹುಟ್ಟಿದೆನು. ನನ್ನ ಪರಾಕ್ರಮದಿಂದಲೇ ನಾನು ಲೋಕದಲ್ಲಿ ಹನುಮಂತ-ಎಂಬ ಹೆಸರಿನಿಂದ ಖ್ಯಾತನಾಗಿ

ದ್ದೇನೆ.

 

೩. ಒಂದು ಪುರಾಣ ಹೇಳುವಂತೆ,

ವಿಷ್ಣುವಿನ ಮೋಹಿನೀ ರೂಪವನ್ನು ಕಂಡು ಶಿವ ಎದೆಗುಂದಲಾಗಿ ಅವನ ತೇಜಸ್ಸು ಸ್ಖಲಿತವಾಗಲು, ಸಪ್ತರ್ಷಿಗಳೆಲ್ಲ ಸೇರಿ ಅವನ ತೇಜಸ್ಸನ್ನು ಒಂದು ಎಲೆಯಲ್ಲಿರಿಸಿದರು. ಅನಂತರ ಮುಂದಿನ ಕಾರ್ಯಸಿದ್ಧಿಗಾಗಿ ಅವರು ಆ ತೇಜಸ್ಸನ್ನು ಗೌತಮರ ಮಗಳಾದ ಅಂಜನೆಯ ಕಿವಿಯಲ್ಲಿ ಸುರಿದರು. ಆಗ ಶಿವನೇ ಹನುಮಂತನಾಗಿ ಅಂಜನೆಯಲ್ಲಿ ಜನಿಸಿದನು. ನಂತರ ಸೂರ್ಯನನ್ನು ನುಂಗಲು ಹೋಗಿ, ತನ್ನ ಪರಾಕ್ರಮವನ್ನು ಮೆರೆದು, ದೇವತೆಗಳಿಂದ ವರವನ್ನು ಪಡೆದು ತನ್ನ ತಾಯಿಯನ್ನು ಸೇರಿದನು. ಅನಂತರ  ತಾಯಿಯ ಆಜ್ಞೆಯಂತೆ ಸೂರ್ಯದೇವನಲ್ಲೇ ಅಧ್ಯಯನ ಮಾಡಿ, ಸುಗ್ರೀವನ ಮಂತ್ರಿಯಾದ......... ಇತ್ಯಾದಿ ಯಾಗಿ (ಶಿವ. ಪು. ಶತರುದ್ರ. ೨೦. )[6]

 

೪. ಮತ್ತೊಂದು ಪುರಾಣ ಹೇಳುವಂತೆ,

ಅಂಜನೆ ಅಹಲ್ಯಾ -ಗೌತಮರ ಮಗಳು.  ಅಹಲ್ಯೆ,ಇಂದ್ರನಿಂದಲೂ, ಸೂರ್ಯನಿಂದಲೂ ರಹಸ್ಯವಾಗಿ ಒಬ್ಬೊಬ್ಬ ಮಗನನ್ನು ಪಡೆದಿದ್ದಳು. ಒಮ್ಮೆ ಗೌತಮರು ಆ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಅಂಜನೆಯನ್ನೂ ಕರೆದು ಕೊಂಡು ಸಮುದ್ರತೀರದಲ್ಲಿ ಸಂಚರಿಸುತ್ತಿದ್ದರು. ಆಗ ಮಗಳಾದ ಅಂಜನೆಯು ಆ ಇಬ್ಬರ ಮಕ್ಕಳ ರಹಸ್ಯವನ್ನು ತಿಳಿಸಲಾಗಿ, ಕೋಪಗೊಂಡ ಮುನಿಗಳು, ಇವರಿಬ್ಬರೂ ನನ್ನ ಮಕ್ಕಳಲ್ಲದೇ ಹೂದರೆ ಈ ಕೂಡಲೇ ಇವರು ಕಪಿಮುಖದವರಾಗಲಿ ಎಂದು ಶಪಿಸಿದರು. ಅವರೇ ವಾಲಿ ಮತ್ತು ಸುಗ್ರೀವ. ತನ್ನ ಮಗಳು ಗುಟ್ಟು ರಟ್ಟು ಮಾಡಿದಳೆಂದು ಕೋಪಗೊಂಡ ಅಹಲ್ಯೆಯು ನೀನೂ ಕುರುಡಿಯಾಗು ಮತ್ತು ನಿನ್ನ ಹೊಟ್ಟೆಯಲ್ಲಿ ಕಪಿಯೇ ಹುಟ್ಟುವಂತಾಗಲಿ ಎಂದು ಶಪಿಸಿದಳು. ಅದರಂತೆಯೇ ಹನುಮಂತನು ಕಪಿಯಾಗಿ ಜನಿಸಿದ. ( ಆಂಧ್ರಭಾಷೆಯ ವಚನವಿಚಿತ್ರ ರಾಮಾಯಣ  ) ಇವಿಷ್ಟು ವೇಂಕಟಾಚಲ ಮಾಹಾತ್ಮ್ಯಕ್ಕೆ ಸಂಬಂಧಿಸದೇ ಕೇವಲ ಅಂಜನೆಯ, ಮತ್ತು ಹನುಮಂತನ ಕಥೆಯನ್ನು ಹೇಳುವ ಪ್ರಸಂಗಗಳು.

 

 TTD  ಯವರ ಪುರಾಣಗಳು

 

ವೇಂಕಟಾಚಲಮಾಹಾತ್ಮ್ಯಗಳೆಂದು ಪ್ರಚಾರವಾದ ಕೆಲವು ಪುರಾಣದ ಭಾಗಗಳನ್ನು ಗಮನಿಸೋಣ.  TTD  ವತಿಯಿಂದ ಪ್ರಕಟಪಡಿಸಲಾದ "ವೇಂಕಟಾಚಲಮಾಹಾತ್ಮ್ಯ" ಎಂಬ ಪುರಾಣಕಥೆಗಳ ಸಂಕಲನದ ಆಧಾರದಲ್ಲಿ AJTA ಎಂಬ ಕಿರು ಹೊತ್ತಿಗೆ ರಚಿತವಾಗಿದೆ.  ಇದರಲ್ಲಿ ಉಲ್ಲೇಖಿಸಿದ ಪುರಾಣಗಳ ಕಥೆಯನ್ನು ಒಮ್ಮೆ ನೋಡೋಣ,

TTD ಹೇಳುವಂತೆ, ಸ್ಕಾಂದ, ವರಾಹ, ಬ್ರಹ್ಮಾಂಡ, ಮೊದಲಾದ ೧೨ ಪುರಾಣಗಳಲ್ಲಿ ವೇಂಕಟಾಚಲದ ಪ್ರಸ್ತಾವನೆ ಇದೆ ಎಂದು ತಿಳಿಸಿದ್ದಾರೆ.

 

೧. ಬ್ರಹ್ಮಾಂಡಪುರಾಣ ? (AJTA ಪುಟ ಸಂಖ್ಯೆ ೪ ಮತ್ತು ೫  )

 

1.अञ्जनाद्रिर्वृषाद्रिश्च शेषाद्रिर्गरुडाचल: तीर्थाद्रि: श्रीनिवासाद्रिश्चिन्तामणिगिरिस्तथा  २१

वृषभाद्रिर्वराहाद्रिर्ज्ञानाद्रि: कनकाचल: आनन्दाद्रिश्च नीलाद्रि: सुमेरुशिखराचल: २२

वेङ्कटाद्रि: पुष्कराद्रिरिति नामानि विंशति: वेङ्कटाद्रिसमं स्थानं ब्रह्माण्डे नास्ति किञ्चन २४

वेङ्कटेशसमो देवो भूतो भविष्यति

ब्रह्माण्ड.पु. वेङ्कटाचलमाहात्म्यम् तीर्थखण्ड. .

 

ಈ ಪ್ರಮಾಣದಂತೆ ಶ್ರೀನಿವಾಸನ ಕ್ಷೇತ್ರವಾದ ವೇಂಕಟಾದ್ರಿಗೆ

೧. ಅಂಜನಾದ್ರಿ  ೨. ವೃಷಾದ್ರಿ  ೩. ಶೇಷಾದ್ರಿ  ೪. ಗರುಡಾಚಲ  ೫. ತೀರ್ಥಾದ್ರಿ  ೬. ಶ್ರೀನಿವಾಸಾದ್ರಿ  ೭. ಚಿಂತಾಮಣಿಗಿರಿ  ೮.ವೃಷಭಾದ್ರಿ ೯. ವರಾಹಾದ್ರಿ  ೧೦. ಜ್ಞಾನಾದ್ರಿ ೧೧. ಕನಕಾಚಲ ೧೨.  ಆನಂದಾದ್ರಿ ೧೩. ನೀಲಾದ್ರಿ ೧೪.  ಸುಮೇರುಶಿಖರಾಚಲ ೧೫.  ವೈಕುಂಠಾದ್ರಿ ೧೬. ಪುಷ್ಕರಾದ್ರಿ   ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ.

ಅಂಜನೆಯ ತಪಸ್ಸಿನ ಫಲವಾಗಿ ಆಂಜನೇಯನು ಜನಿಸಿದ ಸ್ಥಲವಾದ್ದರಿಂದ ಅಂಜನಾದ್ರಿಯೆಂದು ತ್ರೇತಾಯುಗದಿಂದಲೂ ಪ್ರಸಿದ್ದವಾಗಿದೆ. ಆದ್ದರಿಂದಲೇ ವ್ಯಾಸರು ಈ ಪರ್ವತವನ್ನು  ಕೃತಯುಗದಲ್ಲಿ ವೃಷಾದ್ರಿಯೆಂದು, ತ್ರೇತಾಯುಗದಲ್ಲಿ ಅಂಜನಾಚಲವೆಂದು, ದ್ವಾಪರದಲ್ಲಿ ಶೇಷಶೈಲವೆಂದು ಕಲಿಯುಗದಲ್ಲಿ ವೇಂಕಟಾಚಲವೆಂದೂ ಕೊಂಡಾಡಿದ್ದಾರೆ. 

 

2. कृते वृषाद्रिं वक्ष्यन्ति त्रेतायामञ्जनाचलम् द्वापरे शेषशैलेति कलौ श्री वेङ्कटाचलम्

अञ्जना तप: कृत्वा हनूमन्तमजीजनत्   ಎಂದು

यस्मात् पुत्रम् असूत सा जगु: तस्मात् इमं गिरिम् अञ्जनाद्रिम् -

ಎಂದು ಹೆಸರಿಸಿದ್ದಾರೆ, ಎಂದರೆ ಅಂಜನೆಯು ಮಗನನ್ನು ಪಡೆದ ಪರ್ವತ ಇದು ಆದ್ದರಿಂದ ಇದು ಅಂಜನಾದ್ರಿ ಆಗಿದೆ.

 

       3.  अञ्जने ! त्वं हि शेषाद्रौ तपस्तप्त्वा सुदारुणम् पुत्रं सूतवती यस्मात् लोकत्रयहिताय वै  ब्रह्माण्ड.पु. वेङ्कटाचलमाहात्म्यम् तीर्थखण्ड. अ. ५-६४

ಅಂಜನಾದೇವಿ! ನೀನು  ಶೇಷಪರ್ವತದಲ್ಲಿ ಅತ್ಯಂತ ತೀವ್ರ ತಪಸ್ಸು ಮಾಡಿ, ಮಗನನ್ನು ಪಡೆದಿರುವೆ. ಆದ್ದರಿಂದ ತಪಸ್ಸು ಮೂರ್ಲೋಕವನ್ನು ರಕ್ಷಿಸುವ ಮಹಿಮೆ ಹೊಂದಿದೆ.  ಆದ್ದರಿಂದ  

 

अञ्जनाचल इत्येव नात्र कार्या विचारणा प्रसिद्धिं यातु शैलो यं अञ्जने ! नामतस्तव ॥ब्रह्माण्ड.पु. वेङ्कटाचलमाहात्म्यम् तीर्थखण्ड. अ. ५-६५

ಪರ್ವತದ ಮಹಿಮೆಯನ್ನು ಹೇಳುತ್ತಾ- ಅಂಜನೆಯೇ ! ನೀನು ತಪಸ್ಸು ಮಾಡಿ  ಪರ್ವತಕ್ಕೆ ಮತ್ತಷ್ಟು ಹಿರಿಮೆಯನ್ನು ತಂದಿರುವೆ. ಮಹಾಮಹಿಮನಾದ ಮಗನನ್ನು ಪಡೆದಿರುವೆ. ಆದ್ದರಿಂದ ಇನ್ನು ಪರ್ವತವು  ನಿನ್ನ ಹೆಸರಿನಿಂದ ಪ್ರಸಿದ್ದವಾಗುತ್ತದೆ. ವಿಷಯದಲ್ಲಿ ಸಂದೇಹ ಬೇಡ. ಎಂದು ದೇವತೆಗಳು ಪ್ರಶಂಸೆ ಮಾಡಿದರು.

 

AJTA ಪುಟ ಸಂಖ್ಯೆ ೪ ಮತ್ತು ೫  ರ ವಿಮರ್ಶೆ

 

[ವಾಸ್ತವದಲ್ಲಿ ಅನೇಕ ಪುರಾಣಗಳ ಆವೃತ್ತಿಗಳನ್ನು ಪರಿಶೀಲಿಸಿದಾಗ,  ಸ್ಕಾಂದ, ಭವಿಷ್ಯೊತ್ತರ, ಆದಿತ್ಯ, ಪುರಾಣಗಳ ಹೆಸರಲ್ಲಿ ವೇಂಕಟಾಚಲಮಾಹಾತ್ಮ್ಯ ಕೆಲವೆಡೆ ಸಿಗುತ್ತದೆ, ಭವಿಷ್ಯೊತ್ತರ ಪುರಾಣದ ಕಥೆಯೆಂದು ಪ್ರಸಿದ್ಧವಾದ ಪ್ರಾಚೀನ ಕಥೆಯೊಂದು ಪ್ರಾಯ: ವೈಶಾಖ ಮತ್ತು ಆಶ್ವಯುಜ ಮಾಸಗಳಲ್ಲಿ ಎಲ್ಲೆಡೆ ಪಠನ ಶ್ರವಣ ಮಾಡುವ ಪದ್ಧತಿಯಲ್ಲಿ ಬಂದಿದೆ.  ಆದ್ದರಿಂದ ವೇಂಕಟಾಚಲಮಾಹಾತ್ಮ್ಯ ವನ್ನು ಗೌರವಿಸತಕ್ಕದ್ದೇ.  ಹಾಗೇಂತ ಅದನ್ನು ವಿಪರೀತವಾಗಿ ಬಳಸುವುದು ತಪ್ಪು. ವ್ಯಾಸರು ರಚಿಸಿದ ೧೮ ಪುರಾಣಗಳಲ್ಲಿ ಪ್ರಾಯ: ಇದುವರೆಗೂ ನಾನು ಪರಿಶೀಲಿಸಿದ ಹಳೆಯ ತಾಡವಾಲೆಗಳಲ್ಲಿ, ಎಲ್ಲಿಯೂ ವೇಂಕಟಾಚಲದ ಉಲ್ಲೇಖವಿಲ್ಲ. ಆದ್ದರಿಂದ  ಯಾವುದನ್ನು ಎಷ್ಟು ಸ್ವೀಕರಿಸಬೇಕು, ಯಾವುದು ಪ್ರಮಾಣವಾಗಬಲ್ಲದು  ಎಂದು ತಿಳಿಯಲು ಅನೇಕ ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ಮಹಾಪುರಾಣಗಳಲ್ಲಿ ಹೀಗೆ ಅನೇಕ ಕಥೆಗಳನ್ನು ಸೇರಿಸುವ ಕ್ರಮ ಬಹಳ ಪ್ರಾಚೀನವಾದದ್ದು. ಅದರ ಕುರಿತು ಪ್ರತ್ಯೇಕ ವಿಮರ್ಶೆಯ ಅಗತ್ಯವಿದೆ ಅದನ್ನು ನಂತರದ ನನ್ನ ಪ್ರತ್ಯೇಕ ಲೇಖನದಲ್ಲಿ ತಿಳಿಸುತ್ತೇನೆ. ]

          ಪ್ರಸ್ತುತ ಮೇಲಿನ (ಬ್ರಹ್ಮಾಂಡ ಪುರಾಣದ್ದು ಎಂದು ಹೇಳಲಾದ ) ಶ್ಲೋಕಗಳನ್ನು ಅದರ ಅನುವಾದವನ್ನೂ ಗಮನಿಸಿ,

 

1.   अञ्जनाद्रिर्वृषाद्रिश्च शेषाद्रिर्गरुडाचल: । तीर्थाद्रि: श्रीनिवासाद्रिश्चिन्तामणिगिरिस्तथा  ॥ २१ ॥

वृषभाद्रिर्वराहाद्रिर्ज्ञानाद्रि: कनकाचल: । आनन्दाद्रिश्च नीलाद्रि: सुमेरुशिखराचल: ॥ २२ ॥

वेङ्कटाद्रि: पुष्कराद्रिरिति नामानि विंशति: ।

 

೧. ಅಂಜನಾದ್ರಿ  ೨. ವೃಷಾದ್ರಿ  ೩. ಶೇಷಾದ್ರಿ  ೪. ಗರುಡಾಚಲ  ೫. ತೀರ್ಥಾದ್ರಿ  ೬. ಶ್ರೀನಿವಾಸಾದ್ರಿ  ೭. ಚಿಂತಾಮಣಿಗಿರಿ  ೮.ವೃಷಭಾದ್ರಿ ೯. ವರಾಹಾದ್ರಿ  ೧೦. ಜ್ಞಾನಾದ್ರಿ ೧೧. ಕನಕಾಚಲ ೧೨.  ಆನಂದಾದ್ರಿ ೧೩. ನೀಲಾದ್ರಿ ೧೪.  ಸುಮೇರುಶಿಖರಾಚಲ ೧೫.  ವೈಕುಂಠಾದ್ರಿ ೧೬. ಪುಷ್ಕರಾದ್ರಿ   ಎಂದು ಇಪ್ಪತ್ತು ಹೆಸರುಗಳಿವೆ. ಎನ್ನುತ್ತದೆ ಪುರಾಣ ಆದರೆ ಇಲ್ಲಿ ಹೇಳಿದ್ದು ೧೬ ಹೆಸರುಗಳನ್ನುಮಾತ್ರ.  TTD ಇದನ್ನು ಗಮನಿಸಿದೆಯೋ ಇಲ್ಲವೋ ಗೊತ್ತಿಲ್ಲ.

ಹಾಗೆಯೇ   

2.     कृते वृषाद्रिं वक्ष्यन्ति त्रेतायामञ्जनाचलम् । द्वापरे शेषशैलेति कलौ श्री वेङ्कटाचलम् ॥

ಇದು ವ್ಯಾಸರ ವಚನ ಎಂದಿದ್ದಾರೆ. ಇಲ್ಲಿ ಹೇಳಿದ ವೃಷಾದ್ರಿ ಮತ್ತು ವೃಷಭಾದ್ರಿ   ಒಂದೆಯೋ ಬೇರೆಯೋ TTD ಯವರೇ ಹೇಳಬೇಕು. ಒಂದೇ ಆದರೆ ಮೇಲಿನ ೨೦ ಹೆಸರು  ಎಂದು ೧೬ ರೇ ಹೆಸರು ಹೇಳಿರುವುದರಲ್ಲಿ  ವೃಷಾದ್ರಿ ಮತ್ತು ವೃಷಭಾದ್ರಿ  ಎಂದು ಪ್ರತ್ಯೇಕ ಉಲ್ಲೇಖವಿರುವುದು ಸರಿಯಲ್ಲ. ಆಗ ೧೫ ದೇ ಹೆಸರು ಹೇಳಿದಂತಾಗುತ್ತದೆ.

 ಇಲ್ಲ ಬೇರೆ ಬೇರೆ ಎಂದು ಹೇಳಿದರೂ ೨೦ ಸಂಖ್ಯೆಯಂತೂ ಪೂರ್ಣವಾಗದು. ಅಲ್ಲದೇ ಕೃತಯುಗದಲ್ಲಿ ವೃಷಾದ್ರಿಯೋ ಅಥವಾ  ವೃಷಭಾದ್ರಿಯೋ ಎಂದು  TTD ಯವರೇ ಹೇಳಬೇಕು ಹೊರತು ವ್ಯಾಸರಿಂದಾಗದು.   

 

3.  अञ्जने ! त्वं हि शेषाद्रौ तपस्तप्त्वा सुदारुणम् पुत्रं सूतवती यस्मात् लोकत्रयहिताय वै  ब्रह्माण्ड.पु. वेङ्कटाचलमाहात्म्यम् तीर्थखण्ड. अ. ५-६४

ಅಂಜನಾದೇವಿ! ನೀನು ಮೂರ್ಲೋಕದ ಹಿತಕ್ಕಾಗಿಯಷ್ಟೇ ಶೇಷಪರ್ವತದಲ್ಲಿ ಅತ್ಯಂತ ತೀವ್ರ ತಪಸ್ಸು ಮಾಡಿ, ಮಗನನ್ನು ಪಡೆದಿರುವೆ. ಆದ್ದರಿಂದ

 

[7]अञ्जनाचल इत्येव नात्र कार्या विचारणा प्रसिद्धिं यातु शैलोयं अञ्जने ! नामतस्तव

ब्रह्माण्ड.पु. वेङ्कटाचलमाहात्म्यम् तीर्थखण्ड. अ. ५-६५

ಅಂಜನೆಯೇ ! ಇನ್ನು ಪರ್ವತವು  ನಿನ್ನ ಹೆಸರಿನಿಂದ ಪ್ರಸಿದ್ದವಾಗಲಿ. ವಿಷಯದಲ್ಲಿ ಸಂದೇಹ ಬೇಡ. ಎಂದು ದೇವತೆಗಳು ಹರಸಿದರು.  ಇದಿಷ್ಟು ಯಥಾವತ್ತಾದ ಅನುವಾದ.

 

ಇಲ್ಲಿ ಆಲೋಚನೆ ಮಾಡಬೇಕಾದ ವಿಷಯ - ಅಂಜನಾದೇವಿ ತ್ರೇತಾಯುಗದಲ್ಲಿ ತಪಸ್ಸು ಮಾಡಿದ್ದು. ಆಗ ಆ ಪರ್ವತದ ಹೆಸರು ವೃಷಾದ್ರಿಯೋ, ವೃಷಭಾದ್ರಿಯೋ ಇರಬೇಕಿತ್ತು.   ಪರ್ವತಕ್ಕೆ ಶೇಷಾದ್ರಿ ಎಂಬ ಹೆಸರು ಬಂದದ್ದು  ದ್ವಾಪರದಲ್ಲಿ.  ತ್ರೇತಾಯುಗದ ನಂತರವಷ್ಟೇ ದ್ವಾಪರಯುಗ ! ಹಾಗಾದರೆ ದೇವತೆಗಳು ಅಂಜನೆಗೆ  (त्वं हि शेषाद्रौ तपस्तप्त्वा सुदारुणम् ) ನೀನು  ಶೇಷಪರ್ವತದಲ್ಲಿ ಅತ್ಯಂತ ತೀವ್ರ ತಪಸ್ಸು ಮಾಡಿ, ಮಗನನ್ನು ಪಡೆದಿರುವೆ ಎಂದು ದೇವತೆಗಳು ಪ್ರಶಂಸೆ  ಸರಿಯಾದೀತೆ ?

ಅಥವಾ ಛಂದಸ್ಸಿನ ಹೊದಾಣಿಕೆಗೆ ವೃಷಾದ್ರಿ ಅಥವಾ  ವೃಷಭಾದ್ರಿ ಹೆಸರನ್ನು ಬಿಟ್ಟು  ಮುಂದಿನ ಯುಗದ ಶೇಷಾದ್ರಿ ಎಂಬ ಹೆಸರನ್ನು ಬಳಸಿಕೊಂಡರೇನೋ TTD ಯವರೇ ಹೇಳಬೇಕು ಹೊರತು ವ್ಯಾಸರಿಂದಾಗದು.

 

AJTA ಪುಟ ಸಂಖ್ಯೆ ೬,  ,

 

"బ్రహ్మాండపురాణంలొ చప్పబడిన వృత్తాంతలో కొన్ని ముఖ్యమైన విశేషాలు ఇలా ఉన్నాయి"

 

1.               ಹಿಂದೆ ತ್ರೇತಾಯುಗದಲ್ಲಿ ಕೇಸರಿ ಎಂಬ ಹೆಸರಿನ  ರಾಕ್ಷಸ ಇದ್ದ. ಅವನು ಶಿವನನ್ನು ಕುರಿತು ತಪಸ್ಸು ಮಾಡಲು, ಶಿವನು ಪ್ರತ್ಯಕ್ಷನಾದ. "ಮಹಾಬಲಪರಾಕ್ರಮಶಾಲಿ ಯಾದ ಮಗನನ್ನು ಅನುಗ್ರಹಿಸು" ಎಂದು ವರ ಬೇಡಲು,   ನಿನಗೊಬ್ಬ ಪುತ್ರಿ ಜನಿಸುವಳು ಎಂದು ಅನುಗ್ರಹಿಸಿದನು ಶಿವನು. ರಾಕ್ಷಸನ ಮಗಳೇ ಅಂಜನಾದೇವಿ. ಅವಳು ಬೆಳೆದು ದೊಡ್ಡವಳಾದ ಸಮಯಕ್ಕೆ ಕೇಸರಿ ಎಂಬ ಹೆಸರಿನ ಒಬ್ಬ ವಾನರ ವೀರ ಅಂಜನೆಯ ತಂದೆಯಾದ ಕೇಸರಿಯ  ಬಳಿ ಸಾರಿ ನಿನ್ನ ಮಗಳನ್ನು ನನಗೆ ಮದುವೆ ಮಾಡಿ ಕೊಡು ಎಂದು ಕೇಳಿದ. ಬಲಶಾಲಿಯಾದ, ತನ್ನ ಹೆಸರಿನವನೇ ಆದ  ಯುವಕನನ್ನು ಕಂಡು ಸಂತಸಗೊಂಡು, ಕೇಸರಿ ಎಂಬ ವಾನರನಿಗೆ ತನ್ನ ಮಗಳನ್ನಿತ್ತು ಮದುವೆ ಮಾಡಿದ ರಾಕ್ಷಸ ಕೇಸರಿ.

ಅವರಿಗೆ ಎಷ್ಟು ಕಾಲವಾದರೂ ಮಕ್ಕಳಾಗಲಿಲ್ಲ. ಅಂಜನೆಯು ಅನೇಕ ವ್ರತಗಳನ್ನೂ ಮಾಡಿದಳು. ಒಂದು ದಿನ  ತನ್ನ ಮನೆಗೆ ಬಂದ ಕೊರವಂಜಿಯೊಬ್ಬಳನ್ನು ಕುರಿತು, ತನಗೆ ಸಂತಾನ ಭಾಗ್ಯವಿದೆಯೇ ಎಂದು ಕೇಳಿದಳು.  ಆಗ ಕೊರವಂಜಿ

 

2.   अभीष्टस्तव पुत्रो वै भविष्यति संशय:

मा शोकं कुरु कल्याणि धर्मेण मम ते शपे

ನಿನ್ನ ಅಭೀಷ್ಟದಂತೆ ನಿನಗೆ ಪುತ್ರ ಪ್ರಾಪ್ತಿ ಆಗಲಿದೆ ಸಂದೇಹವಿಲ್ಲ. ಆದ್ದರಿಂದ ಹೇ ಕಲ್ಯಾಣಿ ಶೋಕಪಡದಿರು. (ನಾನು ಹೇಳುವುದು ಸತ್ಯ) ನನ್ನ (ವೃತ್ತಿಯ) ಮೇಲಾಣೆ.

 

3.   श्रीवेङ्कटगिरौ सप्त साहस्रं वत्सरान् पुन:  तप: कुरु तत: पुत्रमवाप्स्यसि सुशोभनम् 

इत्युक्त्वा सा निमित्तज्ञा  यथागतमथो ययौ

ನೀನು ಅದಕ್ಕಾಗಿ ಶ್ರೀವೇಂಕಟಗಿರಿಯಲ್ಲಿ ಏಳು ಸಾವಿರ ವರ್ಷ ತಪಸ್ಸು ಮಾಡು. ಅದರಿಂದ ನೀನು ಮಂಗಲಾಕಾರನಾದ ಮಗನನ್ನು ಪಡೆಯುವೆ. ಎಂದು ಹೇಳಿ ಆಕೆ ಬಂದ ಮಾರ್ಗದಲ್ಲೇ ಹಿಂತಿರುಗಿದಳು.

4.   अञ्जना चिन्तयन्ती तद्वाक्यं तस्या मनोहरम्  प्रचक्रमे तपश्चर्तुं  श्रीवेङ्कटगिरेस्तटे

आकाशगङ्गा निकटे  सिद्धसङ्घनिषेविते वाय्वाहारान् वायुं वै समुद्दिश्य सुदारुणम्

तपश्चचार दान्तेयं प्रीणयन्ती व्रतैरिमम् ॥

ಆ ಕೊರವಂಜಿಯ ಮನೋಹರವಾದ ಮಾತನ್ನು ನೆನೆದು, ಅವಳ ಮಾತಿನಂತೆ  ಅನೇಕಸಿದ್ಧಪುರುಷರಿಗೆ ಆಶ್ರಯವಾದ  ಶ್ರೀವೇಂಕಟಗಿರಿಯ ಆಕಾಶಗಂಗೆಯ ಸಮೀಪದಲ್ಲಿ ತಪಸ್ಸಿಗೆ ತೊಡಗಿದಳು. ಕೇವಲ ವಾಯು ಭಕ್ಷಣ ಮಾಡುವವಳಾಗಿ ಇಂದ್ರಿಯನಿಗ್ರಹವನ್ನು ಸಾಧಿಸಿ, ವಾಯುದೇವನನ್ನು ಉದ್ದೇಶಿಸಿ, ವ್ರತಗಳಿಂದ ಅವನನ್ನು ಸಂತೋಷಪಡಿಸುತ್ತ, ಅತ್ಯಂತ ತೀವ್ರವಾದ ತಪಸ್ಸನ್ನು ಮಾಡಿದಳು.

[8](ಸಂತುಷ್ಟನಾದ ವಾಯುದೇವನು , ದಿನಕ್ಕೊಂದು ಹಣ್ಣನ್ನು ಅವಳಿಗೆ ಅನುಗ್ರಹಿಸಿದನು. ಒಂದು ದಿನ ಆ ವಾಯುವು ಶಿವತೇಜಸ್ಸಿನಿಂದ ಕೂಡಿದ ಫಲವನ್ನು ಅವಳಿಗಿತ್ತನು. ಆ ಫಲವನ್ನು ತಿಂದ ಅವಳು ಗರ್ಭಧರಿಸಿದಳು. ದೈವಪ್ರಸಾದದಿಂದ ಗರ್ಭಧರಿಸಿದ ಅವಳನ್ನು ಕುರಿತು ಆಕಾಶವಾಣಿ ಹೀಗೆ ತಿಳಿಸಿತು. "

ಶಿವನ ತೇಜಸ್ಸಿನಿಂದ ನಿನ್ನಲ್ಲಿ ಜನಿಸಲಿರುವ ಮಗನು ಲೋಕೋತ್ತರಶಕ್ತಿಸಂಪನ್ನನೂ, ಭವಿಷ್ಯತ್ತಿನಲ್ಲಿ ಲೋಕಕಂಟಕನಾದ ಲಂಕಾಪತಿಯಾದ ರಾವಣನೆಂಬ ರಾಕ್ಷಸ ರಾಜನನ್ನು ಸಂಹರಿಸಲು ವಿಷ್ಣುವು ಶ್ರೀರಾಮನಾಗಿ ಅವತರಿಸಿದಾಗ, ಆ ಶ್ರೀರಾಮನಿಗೆ ಸಹಾಯಕನಾಗಿ, ನಿನ್ನ ಮಗ ಖ್ಯಾತಿಯನ್ನು ಪಡೆಯುತ್ತಾನೆ." ಎಂದು  )

 

ततो वै दशमे मासि सम्प्राप्ते नळिनेक्षणा आसूत पुत्रं बलिनमुदयत्यहिमत्विषि

श्रावणे मासि नक्षत्रे श्रवणे हरिवासरे कुण्डलोद्भासितं चैव दिव्यमानमिव श्रिया

बिभ्राणं वानराणां वै रूपमत्यद्भुतं महत् रक्तास्यपुच्छमूलं तु सुवर्णसदृशद्युतिम्

 

ಗರ್ಭಧರಿಸಿದ ನಂತರ ಅಂಜನಾ ದೇವಿ ಹತ್ತನೆಯ ತಿಂಗಳು  ಶ್ರಾವಣ ಮಾಸದಲ್ಲಿಶ್ರವಣಾ ನಕ್ಷತ್ರದಲ್ಲಿ, ದ್ವಾದಶೀ ಪ್ರಥಮ ಪಾದದಲ್ಲಿ, (ದ್ವಾದಶೀ ಪ್ರಥಮ ಪಾದಕ್ಕೆ ಹರಿವಾಸರ ಎಂದು ಹೆಸರು.) ಸೂರ್ಯೋದಯಕ್ಕೆ ಸರಿಯಾಗಿ ಮಹಾಬಲವಂತನಾದ ಮಗುವಿಗೆ ಜನ್ಮವಿತ್ತಳು. ಸುಂದರ ಕುಂಡಲಗಳಿಂದ ಕಂಗೊಳಿಸುವ ಕಪೋಲಗಳಿಂದ ಶೋಭಿಸುವ, ಯಜ್ಞೋಪವೀತದಿಂದ ಕೂಡಿದ,  ಪ್ರಕಾಶಿಸುವ ಕೌಪೀನದಿಂದ ಅಲಂಕೃತನಾದ ಮತ್ತು ದಿವ್ಯ ಕಾಂತಿಯಿಂದ ಕೂಡಿದ  ಅದ್ಭುತವಾದ ವಾನರ ರೂಪವನ್ನು ಧರಿಸಿದ ಕೆಂಪಾದ ಮುಖ ಮತ್ತು ಬಾಲವುಳ್ಳ ಬಂಗಾರದಮೈಬಣ್ಣದ ಕಾಂತಿಯಿಂದ ಶೋಭಿಸುತ್ತಿರುವ..........

 

अतोऽयं जातमात्रोऽपि नितरान्तु बुभुक्षित: उदयाचलसंरूढं ददर्श रविमण्डलम्

नितान्तरक्तवर्णेन फलबुद्धिरभूत्तदा फलमित्येव मन्वानो रविं भक्षितुमुद्यत:

ग्रहीष्यामीति निश्चित्य श्रीवेङ्कटगिरेस्तटे उदतिष्ठन्महावेगादुदयाचलशेखरम्

ग्रहीतुमुद्यते तस्मिन् बिम्बं सूर्यस्य तद्बलात् हाहाकृतमभूत्सर्वं जगत्स्थावरजङ्गमम्

 

ಜನಿಸಿದ ಮಾತ್ರದಲ್ಲೇ ಇವನು ಹಸಿವಿನಿಂದ ಕೂಡಿದವನಾಗಿ ಆಗ ತಾನೆ ಉದಯಾಚಲದಲ್ಲಿ ಮೂಡಿದ ಸೂರ್ಯ ಮಂಡಲವನ್ನು  ನೋಡಿದ. ಅತ್ಯಂತ ಕೆಂಪಾದ ಆ ಸೂರ್ಯ ಮಂಡಲವನ್ನು  ತಿನ್ನುವ ಹಣ್ಣೆಂದು ತಿಳಿದ. ಸೂರ್ಯ ಮಂಡಲವನ್ನು   ಹಣ್ಣೆಂದು ತಿಳಿದು ಅದನ್ನು ತಿನ್ನಲು  ಬಯಸಿದ. ಆ ಸೂರ್ಯ ಮಂಡಲವನ್ನು ಹಿಡಿಯುವೆನೆಂದು ಶ್ರೀವೇಂಕಟಗಿರಿಯ ತಟದಿಂದ ಉದಯಗಿರಿಶಿಖರದೆಡೆಗೆ ಹಾರಿದನು. ಆ ಬಾಲಕನು ತನ್ನ ಪರಾಕ್ರಮದಿಂದ ಸೂರ್ಯ ಬಿಂಬವನ್ನು ಹಿಡಿಯಲು ಹೊರಟಾಗ ಸ್ಥಾವರಜಂಗಮಾತ್ಮಕವಾದ ಪ್ರಪಂಚದಲ್ಲಿ  ಎಲ್ಲೆಡೆ ಹಾಹಾಕಾರ ಉಂಟಾಯಿತು.

ಹಾಗೆ  ಸೂರ್ಯ ಬಿಂಬವನ್ನು ಹಿಡಿಯಲು ಹೊರಟ ಮಗುವನ್ನು ಅಸುರನೆಂದು ಭಾವಿಸಿ ಬ್ರಹ್ಮನು ಅವನ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು. ಬಾಲಕನಾದರೂ ತನ್ನ ಬಾಲದಿಂದ ಆ ಬ್ರಹ್ಮಾಸ್ತ್ರವನ್ನು ಪಕ್ಕಕ್ಕೆ ತಳ್ಳಿಹಾಕಿದ. ಆಗ ದೇವತೆಗಳೆಲ್ಲ ನಿಜ ಸಂಗತಿಯನ್ನು ತಿಳಿದು, ಅಂಜನಾದೇವಿಯನ್ನು ಸಾಂತ್ವನ ಗೊಳಿಸಲು ಅವಳ ಮಗನಿಗೆ ಅನೇಕ ವರಗಳನ್ನಿತ್ತರು.

ಆಗ ಬ್ರಹ್ಮದೇವನು ಹೀಗೆ ನುಡಿದ.

 

अञ्जने त्वं हि शेषाद्रौ तपस्तप्त्वा सुदारुणम् पुत्रं सूतवती यस्माल्लोकत्रयहिताय वै

प्रसिद्धिं यातु शैलोऽयमञ्जने ! नामतस्तव अञ्जनाचल इत्येव नात्र कार्या विचारणा

इति तस्यै वरं दत्वा देवा ब्रह्मपुरोगमा: स्वं स्वं स्थानं समुद्दिश्य यथागतमथो ययु:

अञ्जना पुत्रमादाय श्रीवेङ्कटगिरेस्तटम् पुनरागम्य सामोदमलञ्चक्रे निजाश्रमम्

    

     ಓ ಅಂಜನಾದೇವಿ! ನೀನು ಮೂರ್ಲೋಕದ ಹಿತಕ್ಕಾಗಿಯಷ್ಟೇ ಶೇಷಪರ್ವತದಲ್ಲಿ ಅತ್ಯಂತ ತೀವ್ರ ತಪಸ್ಸು ಮಾಡಿ, ಮಗನನ್ನು ಪಡೆದಿರುವೆ. ಆದ್ದರಿಂದ ಅಂಜನೆಯೇ ! ಇನ್ನು ವೇಂಕಟಗಿರಿಯು ಅಥವಾ ಶೇಷಾದ್ರಿಯು    ನಿನ್ನ ಹೆಸರಿನಿಂದ ಅಂಜನಾದ್ರಿ ಎಂದು ಪ್ರಸಿದ್ದವಾಗಲಿ. ಈ ವಿಷಯದಲ್ಲಿ ಸಂದೇಹ ಬೇಡ. ಎಂದು ಬ್ರಹ್ಮಾದಿ ದೇವತೆಗಳು ಹರಸಿ, ತಮ್ಮ ತಮ್ಮ ಲೋಕಗಳಿಗೆ ಹಿಂದಿರುಗಿದರು. ಆಮೇಲೆ ಅಂಜನೆಯು ಆನಂದದಿಂದ ತನ್ನ ಕುಮಾರನೊಂದಿಗೆ ಶ್ರೀವೇಂಕಟಗಿರಿಯಲ್ಲಿರುವ ತನ್ನ ಆಶ್ರಮವನ್ನು ಸೇರಿದಳು.

 

ఈ విషయముగా సంగ్రహంగా స్కాందపురాణంలోని శ్రీవేంకటాచల మాహాత్మ్యం లో చప్పబడింది

.  

AJTA ಪುಟ ಸಂಖ್ಯೆ ೬, ,೮ ಮತ್ತು ೯ ರ ಮೊದಲ ಪ್ಯಾರಾ ವಿಮರ್ಶೆ

 

1.               ಈ ಮೊದಲೇ ಉಲ್ಲೇಖಿಸಿದ ಪುರಾಣಗಳಂತೆ ಅಂಜನೆ ಯಾರು ? ಅವಳು ಗೌತಮರ ಮಗಳೂ?  ಕೇಸರೀ ಎಂಬ ರಾಕ್ಷಸನ ಮಗಳೋ ? ಇಲ್ಲಾ  ರಾಮಾಯಣ ಹೇಳುವಂತೆ ಕುಂಜರ ಎಂಬ ವಾನರನ ಮಗಳೋ ?

 

2.               ಅಂಜನೆ ಕಾಮರೂಪಿಣಿಯಾಗಿದ್ದು  ಅವಳು ವಿಹಾರ ಮಾಡುವ ಸಂದರ್ಭದಲ್ಲಿ ವಾಯು ಅವಳನ್ನು ಮೋಹಿಸಿದನೋ ?   ಅಥವಾ ವಾಯುವಿನ ಪ್ರಸಂಗವೇ ಇಲ್ಲದೇ  ಸಪ್ತರ್ಷಿಗಳು ಗೌತಮರ ಮಗಳಾದ ಅಂಜನೆಯ ಕಿವಿಗೆ ಶಿವನ ತೇಜಸ್ಸು ಸುರಿದರೋ ? ಇಲ್ಲಾ ಅಂಜನೆ ಮತಂಗ ಮುನಿಗಳ ಮಾತಿನಂತೆ ತಪಸ್ಸು ಮಾಡಿ ವಾಯುವನ್ನು ಒಲಿಸಿಕೊಂಡಳೋ ?  ಮತ್ತೇನು, ಕೊರವಂಜಿಯ ಮಾತಿನಂತೆ ತಪಸ್ಸು ಮಾಡಿ ವಾಯುದೇವನಿತ್ತ ಶಿವತೇಜಸ್ಸಿನಿಂದ ಕೂಡಿದ  ಹಣ್ಣನ್ನು ತಿಂದಳೋ ?

 

3.               ಈ ಭಾಗವನ್ನು ವಿಮರ್ಶೆ ಮಾಡುವ ಮೊದಲು ಇದೇ [9]AJTA ನಲ್ಲಿ  TTD ಉಲ್ಲೇಖಿಸಿದ ವ್ಯಾಸರ ಮಾತನ್ನು ದೃಢಪಡಿಸಿಕೊಳ್ಳುವುದು ಉಚಿತ.

 

कृते वृषाद्रिं वक्ष्यन्ति त्रेतायामञ्जनाचलम् । द्वापरे शेषशैलेति कलौ श्री वेङ्कटाचलम् ॥

 

ಹೇ TTD ಯೇ !  ಈ ಮೇಲಿನ ಶ್ಲೋಕದ ಅರ್ಥವನ್ನು ಪುರಾಣದ ಕಥೆಗೆ ಅನುಸಾರವಾಗಿ ಅರ್ಥೈಸುವುದಾದರೆ.  ನಾಲ್ಕು ಯುಗಗಳಲ್ಲಿ ಒಂದೇ ಪರ್ವತಕ್ಕೆ ಕ್ರಮವಾಗಿ ನಾಲ್ಕು ಹೆಸರುಗಳು ಬಂದಿವೆ. ಅದಕ್ಕೆ ಕಾರಣವನ್ನೂ ಆ ಪುರಾಣ ತಿಳಿಸಿದೆ.

 

೧. [10]ಕೃತಯುಗದಲ್ಲಿ ವೃಷಾಸುರ ಅಥವಾ ವೃಷಭಾಸುರನ ತಪಸ್ಸಿನ ಫಲಕ್ಕೆ, ಅವನ ಭಕ್ತಿಗೆ ಮೆಚ್ಚಿ ಅವನ ಅಪೇಕ್ಷೆಯಂತೆ[11] ಶ್ರೀನಿವಾಸ ದೇವರು ಅವನ ಹೆಸರಿನಿಂದ, ಅವನು ತಪಸ್ಸು ಮಾಡಿದ ಪರ್ವತಕ್ಕೆ ವೃಷಾಚಲ ಅಥವಾ ವೃಷಭಾಚಲ ಎಂಬ ಹೆಸರು ಬರಲಿ ಎಂದು ಅನುಗ್ರಹಿಸಿದ.

 

೨. [12]ತ್ರೇತಾಯುಗದಲ್ಲಿ,  ಈ ಮೊದಲು [13]ವೃಷಾಚಲ  ಅಥವಾ ವೃಷಭಾಚಲ ಎಂದು ಪ್ರಸಿದ್ಧವಾಗಿದ್ದ ಪರ್ವತದಲ್ಲಿ ಅಂಜನಾದೇವಿಯು ತಪಸ್ಸು ಮಾಡಿ ಹನುಮಂತನನ್ನು ಮಗನಾಗಿ ಪಡೆದಳಾದ್ದರಿಂದ ತ್ರೇತಾಯುಗದಲ್ಲಿ ಅಂಜನಾಚಲ ಎಂದು ಪ್ರಸಿದ್ಧಿ ಪಡೆಯಿತು.

 

೩. [14]ದ್ವಾಪರದಲ್ಲಿ ವಾಯುದೇವನಿಗೂ, ಆದಿಶೇಷನಿಗೂ ನಡೆದ ಸ್ಪರ್ಧೆಯಲ್ಲಿ ವಾಯುದೇವನ ಪ್ರಭಾವದಿಂದ [15]ಮೇರುವಿನ ಮಗನಾದ ಆನಂದಗಿರಿ ಯು ೫೧೦೦೦ ಯೋಜನ ದೂರ ಹಾರಿ ಬಂದು ಸ್ವರ್ಣಮುಖೀ ನದಿಯ ಉತ್ತರದಿಗ್ಭಾಗದಲ್ಲಿ ನಿಲ್ಲುತ್ತದೆ[16]. ಆಗ ಶೇಷದೇವನು ಕ್ಷಮೆಯಾಚಿಸಲು ವಾಯುದೇವನು ಅವನನ್ನು ಸಮಾಧಾನ ಪಡಿಸಿ, ಇನ್ನು ಮುಂದೆ ಈ ಪರ್ವತವು ನಿನ್ನ ಹೆಸರಿನಿಂದ ಶೇಷಾಚಲ ಎಂದು ಪ್ರಸಿದ್ಧವಾಗಲಿ, ಎಂದೂ, ಅಲ್ಲದೇ ಇದೆಲ್ಲ ಆ ಭಗವಂತನ ಲೀಲೆ. [17]ಮುಂದೆ ಕಲಿಯುಗದಲ್ಲಿ ಆ ಭಗವಂತನು ಈ ಪರ್ವತದಲ್ಲೇ  ನೆಲೆನಿಲ್ಲುವನು ಎಂದು ಅನುಗ್ರಹಿಸಿದನು.

 

೪. [18]ಕಲಿಯುಗದಲ್ಲಾದರೂ ಭಗವಂತನು ನೇರವಾಗಿ ಭೂಮಿಗೆ ಬಂದು ನೆಲೆಸಿದಾಗ[19], ಅವನ ಸಾನ್ನಿಧ್ಯದಿಂದ ಕೂಡಿದ ಈ ಪರ್ವತವನ್ನು ತನಗೆ ಅರಿವಿಲ್ಲದೇ  ಹತ್ತುವಾಗ   ಮಹಾ ಪಾಪಿಯಾದ ಮಾಧವ ಬ್ರಾಹ್ಮಣನೊಬ್ಬನು ತನ್ನ ಎಲ್ಲ ಪಾಪಗಳನ್ನು ಕಳೆದುಕೊಂಡನಾಗಿ, ಈ ಪರ್ವತಕ್ಕೆ ವೇಂಕಟಾಚಲ[20] ಎಂಬ ಹೆಸರು ಬಂತು.

 

ಹೀಗಿರುವಾಗ ಈ [21]ಕೊರವಂಜಿಯಾಗಲೀ [22]ಮತಂಗ ಮುನಿಗಳಾಗಲೀ ತ್ರೇತಾಯುಗದಲ್ಲಿದ್ದ  ಅಂಜನೆಗೆ, ನೀನು ವೃಷಭಾಚಲಕ್ಕೆ ತಪಸ್ಸಿಗೆ ಹೋಗು ಎಂದು ಹೇಳುವಾಗ  ದ್ವಾಪರದ ಶೇಷಾದ್ರಿ ಎಂಬ ಹೆಸರನ್ನು,  ಅಥವಾ ಕಲಿಯುಗದ ವೇಂಕಟಗಿರಿ, ಎಂಬ ಹೆಸರನ್ನಾಗಲೀ ಹೇಳಿದರು ಎಂಬುದು ಎಷ್ಟು ಉಚಿತ, ಪ್ರಾಯ: ವೇದವ್ಯಾಸರಿಗೆ ಪರ್ವತದ ಹೆಸರಲ್ಲಿ ಸಂದೇಹ ಬಂತೋ ಏನೋ ಎನ್ನುವಂತೆ ಮಾಡಿದಿಯಲ್ಲ TTD ?

 

4.               ಈ ಭಾಗದಲ್ಲಿ ಹಲವಾರು ಸಮಸ್ಯೆಗಳು ಸೃಷ್ಟಿಯಾಗುತ್ತವೆ ಕೆಲವನ್ನು ಇಲ್ಲಿ ಉಲ್ಲೇಖಿಸುತ್ತೇನೆ. -

 

ದ್ವಾಪರದಲ್ಲಿ ಆದಿಶೇಷ ಮತ್ತು ವಾಯುದೇವರ  ಸ್ಪರ್ಧೆಯಿಂದ ಸ್ವರ್ಣಮುಖರೀ ನದಿಯ ಉತ್ತರ ಭಾಗದಲ್ಲಿ ಬಂದು ನೆಲೆಸಿದ ಮೇರುವಿನ ಮಗ,  ಆನಂದಗಿರಿ ಶ್ರೀನಿವಾಸನ ನೆಲೆಯಾಗಿದೆ. ಆದ್ದರಿಂದ ಸ್ವರ್ಣಮುಖರೀ ನದಿಯ [23]ಉತ್ತರ ಭಾಗದಲ್ಲಿ ಮೊದಲೇ ಇದ್ದ ವೃಷಭಾಚಲ, ಯಾವುದು ತ್ರೇತಾಯುಗದಲ್ಲಿ ಅಂಜನಾಚಲ ವಾಯಿತೋ ಅದು  ವೇಂಕಟಾಚಲವಲ್ಲ ಎಂಬ ಪ್ರಶ್ನೆ ಬರಲಿಲ್ಲವೇ  TTD ?

 

[24]ವೃಷಭಾಚಲ ವೇಂಕಟಾಚಲ ಬೇರೆ ಬೇರೆ ಆದ್ದರಿಂದ  ಸ್ವಾಮಿಪುಷ್ಕರಿಣೀ ಆಕಾಶಗಂಗೆ  ವೃಷಭಾಚಲದ್ದೋ,  ವೇಂಕಟಾಚಲದ್ದೋ,  ಯಾವುದಾದರೊಂದನ್ನು ನಿರ್ಣಯಿಸಬೇಕಲ್ಲವೇ ? ಕಲಿಯುಗದ ವೇಂಕಟಾಚಲ ಬೇರೆ,   ತ್ರೇತಾದಲ್ಲಿ ಅಂಜನೆ  ತಪಸ್ಸು ಮಾಡಿದ ಪರ್ವತ ಬೇರೆ ಎಂಬುದು ಅನೇಕ ಪ್ರಮಾಣದಿಂದ ಸಾಮಾನ್ಯಬುದ್ಧಿಯವರಿಗೂ ತಿಳಿಯುವ ವಿಷಯ. ಹೀಗಿರುವಾಗ ವೃಥಾ ಕಥೆಗಳಲ್ಲಿ ತಮಗೆ ತೋಚಿದಂತೆ ಎಲ್ಲಿ ಬೇಕೋ ಅಲ್ಲಿ ವೇಂಕಟಗಿರಿ ಶಬ್ದವನ್ನೋ, ವೇಂಕಟೇಶ ಶಬ್ದವನ್ನೋ  ಸೇರಿಸಿರುವುದು  ಸ್ಪಷ್ಟವಾಗುತ್ತದೆ

 

ಆಂಜನೇಯನು ಸೂರ್ಯನನ್ನು ಹಿಡಿಯಲು ಹೊರಟಾಗ ಇಂದ್ರನು ವಜ್ರಾಯುಧವನ್ನು ಪ್ರಯೋಗಿಸಿದನೋ, ಬ್ರಹ್ಮನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನೋ ? ಇಂದ್ರನ ವಜ್ರಾಯುಧದ ಹೊಡೆತದಿಂದ ಗಾಯಗೊಂಡು ಹನುಮಂತನಾದನೋ? ಇಲ್ಲಾ ಹುಟ್ಟುವಾಗಲೇ ಮುಖ ಬಾಲಗಳು ಕೆಂಪಾಗಿದ್ದು ತನ್ನ ಬಲಪರಾಕ್ರಮದಿಂದಲೇ ಹನುಮಂತನೆಂದು ಪ್ರಸಿದ್ಧನಾದನೋ ?

 

ಈ ಯಾವ ಪ್ರಶ್ನೆಯೂ TTD ಗೆ ಬರಲಿಲ್ಲವೇ !  ತನಗೆ ಬೇಕಾದ ವಾಕ್ಯಗಳನ್ನು ಮಾತ್ರ ಅಲ್ಲಿಂದ ಉಲ್ಲೇಖ ಮಾಡುವ TTD  ಪ್ರಾಮಾಣಿಕ ವಿಚಾರಕ್ಕೆ  ಹೊರಟಿದೆಯೋ ? ಇಲ್ಲಾ,  ಶ್ರೀನಿವಾಸ ದೇವರ ಹೆಸರಲ್ಲಿ  ಜನರಲ್ಲಿ  ವೃಥಾ ಗೊಂದಲವನ್ನು ಸೃಷ್ಟಿಸುವ ಹುನ್ನಾರದಲ್ಲಿದೆಯೋ ?

 

AJTA ಪುಟ ಸಂಖ್ಯೆ ೯

 

ఈ విషయముగా సంగ్రహంగా స్కాందపురాణంలోని శ్రీవేంకటాచల మాహాత్మ్యం లో చప్పబడింది

ಎಂದು ಹೇಳಿ,   ಸ್ಕಾಂದ ಪುರಾಣದ ಉಲ್ಲೇಖವನ್ನೇ ಮಾಡಿಲ್ಲ.  ಪ್ರಸಕ್ತಕ್ಕೆ ಅನುಪಯುಕ್ತವಾದ ವಿಷಯಗಳ ವಿಸ್ತಾರದಿಂದ ಯಾವ ಪ್ರಯೋಜನವೂ ಆಗಿಲ್ಲ.

 

चतुर्षु मेरुपार्श्वेषु हेमकूटहिमाह्वये नीले श्वेतनगे चैव निषधे गन्धमादने

ब्रह्माण्डपु. मध्यभाग: . -१९४

ಇಲ್ಲಿ ಸುಮೇರುವನ್ನು ಹನುಮಂತನ ಜನ್ಮಸ್ಥಾನವೆಂದು ಹೇಳಿದ್ದಾರೆ.  ಹಾಗೆಯೇ ರಾಮಾಯಣದಲ್ಲೂ ಶ್ರೀರಾಮನು ಆಸಕ್ತಿಯಿಂದ  ಅಗಸ್ತ್ಯರನ್ನು ಕೇಳಿ, ಹನುಮಂತನ ಜನ್ಮ ವೃತ್ತಾಂತವನ್ನು ತಿಳಿದುಕೊಳ್ಳುತ್ತಾನೆ.

 

सूर्यदत्तवरस्वर्ण: सुमेरुर्नाम पर्वत: यत्र राज्यं प्रशास्त्यस्य केसरी नाम वै पिता

रामायणम् . .का. १९ . ३५ श्लो.

ಈ ಬ್ರಹ್ಮಾಂಡಪುರಾಣದಲ್ಲಿ, ರಾಮಾಯಣದಲ್ಲಿ ಪ್ರತಿಪಾದಿಸಿದ ಸುಮೇರುಪರ್ವತ ವೇಂಕಟಾಚಲವೇ ಆಗಿದೆ.  ಎಂದು  ಬ್ರಹ್ಮಾಂಡಪುರಾಣವೇ ಮತ್ತೊಂದೆಡೆ ಸ್ಪಷ್ಟಪಡಿಸಿದೆ.

" मेरुपुत्रं महापुण्यं वेङ्कटाचलसञ्ज्ञकम् "  ಎಂದು ಮೇರುಪರ್ವತಪುತ್ರ ಎಂದು, ವೇಂಕಟ ಎಂದು, ಬೇರೆ ಬೇರೆ ಹೆಸರನ್ನು ತಿಳಿಸಿದೆ.  ಆ ಸುಮೇರು ಪರ್ವತವು  ಶೇಷನ ಅಂಶದಿಂದ ಜನಿಸಿದೆ,  ಆ ಪ್ಅರ್ವತವು ಋಷಿಗಳಿಗೆ, ದೇವತೆಗಳಿಗೆ, ಮುಕ್ತರಿಗೆ, ಬಂಗಾರದ ಬಣ್ಣದಲ್ಲಿ ತೋರುವುದು.ಎಂದು ವೇಂಕಟೇಶಮಾಹಾತ್ಮ್ಯ ವಿವರಿಸುತ್ತದೆ. ಈ ಸತ್ಯವನ್ನು ಅನ್ನಮಯ್ಯ ತನ್ನ ಎಷ್ಟೋ ಪದ್ಯಗಳಲ್ಲಿ ಉಲ್ಲೇಖಿಸಿದ್ದಾನೆ

 

ಇನ್ನು ತಿರುಮಲೆಯ ಶ್ರೀನಿವಾಸನ ಸೇವೆಯಲ್ಲಿ ಪಠಿಸುವ ವೇಂಕಟಾಚಲ ಮಾಹಾತ್ಮ್ಯದ ಶ್ಲೋಕಗಳಿಂದ ಪುರಾಣಗಳ ಸತ್ಯತೆಯನ್ನೂ ಸತ್ತ್ವವನ್ನೂ ನಾವು ಅರಿಯ ಬಹುದು.

 

ಇನ್ನು ಆಂಜನೇಯನ ಜನ್ಮಸ್ಥಲವಾಗಿ ಹೇಳುವ ಭಾರತ ದೇಶದ ಇತರ ಕ್ಷೇತ್ರಗಳನ್ನು ಪರಿಶೀಲಿಸಲು, ಅವುಗಳಲ್ಲಿ ಯಾವುದೊಂದನ್ನೂ ಆಂಜನೇಯನ ಜನ್ಮಸ್ಥಲ  ಎಂದು ಸಮರ್ಥಿಸಲು ಪುರಾವೆಗಳು ಸಿಗುವ ಸಂಭವವಿಲ್ಲ.

 

AJTA ಪುಟ ಸಂಖ್ಯೆ ೯ ರ ವಿಮರ್ಶೆ-

 

ಇಲ್ಲಿ ಸುಮೇರುವೇ ವೇಂಕಟಾಚಲ, ಎಂದು ಸಮರ್ಥಿಸಲು ನೀಡಿದ ರಾಮಾಯಣದ ಮಾತು ಸ್ಪಷ್ಟವಾಗಿ ಹೇಳುವಂತೆ ಅದು  ಕೇಸರಿಯ ರಾಜಧಾನಿ. ಹೊರತು ಹನುಮಂತನ ಜನ್ಮಸ್ಥಲವಲ್ಲ.

 

यदि वाऽस्ति ह्यभिप्रायस्तच्छ्रोतुं तव राघव समाधाय मतिं राम निशामय वदाम्यहम् १८

सूर्यदत्तवरस्वर्ण: सुमेरुर्नाम पर्वत: यत्र राज्यं प्रशास्त्यस्य केसरी नाम वै पिता १९॥

तस्य भार्या बभूवैषा ह्यञ्जनेति परिश्रुता जनयामास तस्यां वै वायुरात्मजमुत्तमम् २०

रामायणम् .का. ३५-१८ : २०

ಎಲ್ಲಿದ್ದು ಕೇಸರಿಯು ರಾಜ್ಯಪಾಲನ ಮಾಡುವನೋ ಅದು ಸುಮೇರು ಎನ್ನುತ್ತದೆ ರಾಮಾಯಣ, ಆದ್ದರಿಂದ ಕೊರವಂಜಿಯ ಮಾತಿನಂತೆ, ಮತಂಗ ಮುನಿಯ ಮಾತಿನಂತೆಯೋ ಅಂಜನೆಯು ತಪಸ್ಸಿಗೆ ಹೋದ ಸ್ಥಲ ಅದಲ್ಲ ಎಂಬುದು ಸಾಮಾನ್ಯನಿಗೂ ತಿಳಿಯುವ ಸಂಗತಿ.   ಆದ್ದರಿಂದ ಹನುಮಂತನ ಜನ್ಮಸ್ಥಲವೇ ಸುಮೇರು ಎಂಬುದು ತಪ್ಪು. ಒಂದೊಮ್ಮೆ ಸುಮೇರು ಹನುಮಂತನ ಜನ್ಮಸ್ಥಲ ಎನ್ನುವುದಾದರೆ,  [25]ವೇಂಕಟಾಚಲ ಅಂಜನಾದ್ರಿಯಲ್ಲ ಎನ್ನುವುದು ಅನಿವಾರ್ಯ.

 

ಉಪಸಂಹಾರ

 

ಉಳಿದ ಕ್ಷೇತ್ರಗಳು ಹನುಮಂತನ ಜನ್ಮಸ್ಥಲ ಎನ್ನಲು ಯಾವುದೇ ಅಬಾಧಿತವಾದ ಮಹತ್ವದ ಪ್ರಮಾಣಗಳು ಇದೆಯೋ ಇಲ್ಲವೋ ತಿಳಿಯದು ಆದರೆ ಈ ಕಿರುಹೊತ್ತಿಗೆಯಿಂದ ತಿರುಮಲ ಹನುಮಂತನ ಜನ್ಮಸ್ಥಲ ಎನ್ನಲು ಯಾವುದೇ ಅಬಾಧಿತವಾದ ಮಹತ್ವದ ಪ್ರಮಾಣಗಳು ಇಲ್ಲ ಎಂಬುದು ಸ್ಪಷ್ಟವಾಯಿತು.

 

ಯಾವುದನ್ನು ಆಶ್ರಯಿಸಿ, TTD ಯು ಮುಂದಿನ ಪ್ರಮಾಣಗಳನ್ನು ನಿರೂಪಿಸಿದೆಯೋ ಅದೆಲ್ಲ ಈ ಮೇಲಿನ ಎಲ್ಲ ಆಕ್ಷೇಪಗಳಿಗೆ ಉತ್ತರಕೊಡದೇ ಹೋದರೆ  ಪೊಳ್ಳು ಎಂದು ಒಪ್ಪಿಕೊಂಡಂತೆ.  TTD

 ಅರ್ಧಜರತೀಯ ಪ್ರವೃತ್ತಿ ನಿಜವಾಗಿಯೂ ಶೋಚನೀಯವಾಗಿದೆ.

 

ಕೊನೆಗೆ ಒಂದೇ ಒಂದು ಎಚ್ಚರಿಕೆ.

 

ಪುರಾಣಗಳಿಗೆ ಅರ್ಥ ಹಚ್ಚುವುದು ಅಷ್ಟು ಸುಲಭವಲ್ಲ. ಪುರಾಣಗಳ ಪರಿಶುದ್ಧ ಪಾಠವಂತೂ  ಅತ್ಯಂತ ಕಷ್ಟ ಸಾಧ್ಯ, ಹೀಗಿರುವಾಗ ಅಂತಹ ಪುರಾಣಗಳನ್ನು ಆಶ್ರಯಿಸುವಾಗ ಪೂರ್ವಾಪರವನ್ನು ಆಲೋಚಿಸಿ ಆಶ್ರಯಿಸಬೇಕು. ಇಲ್ಲದೇ ಹೋದಲ್ಲಿ ನಿರ್ಣಯಿಸಲು ಹೊರಟ ವಿಷಯ ಹಳ್ಳ ಹಿಡಿಯುವುದು ಖಚಿತ.  ಸದ್ಯಕ್ಕೆ ಅಂತಹ ದುಸ್ಸಾಹಸಕ್ಕೆ ಕೈ ಹಾಕಿ ಅನೇಕ ಅಸಂಗತಿಗಳಿಗೆ ಉತ್ತರಿಸಬೇಕಾದ ಪರಿಸ್ಥಿತಿಯಲ್ಲಿ TTD ಗೆ  ಇದೆ.

 

ಮೂರು ಭಾಷೆಗಳನ್ನು, ಸಪ್ತಭೇದಗಳನ್ನು ನೂರಾರು ರೀತಿಗಳನ್ನು, ತಿಳಿಯದ ವ್ಯಕ್ತಿ ಪುರಾಣಗಳ ಅರ್ಥನಿರೂಪಣೆಗೆ ಹೊರಟಲ್ಲಿ ಅವನು ನರಕಕ್ಕೆ ಗುರಿಯಾಗುವುದು ಖಚಿತ.

 

|| ಶ್ರೀಕೃಷ್ಣಾರ್ಪಣಮಸ್ತು ||



[1] ಯಾಕೋ ಈ ಕಿರುಹೊತ್ತಿಗೆಗೆ ಶೀರ್ಷಿಕೆಯನ್ನು ಕೊಡುವಲ್ಲಿಯೇ ಸಂದೇಹಗಳು ಕಾಡಿದಂತಿದೆ. “ಶ್ರೀ ಆಂಜನೇಯಸ್ವಾಮಿಯ ಜನ್ಮಸ್ಥಲ  ತಿರುಮಲೆಯಲ್ಲಿ ಅಂಜನಾದ್ರಿ”

[2] ಈ ಕಿರುಹೊತ್ತಿಗೆಯನ್ನು ರಚಿಸಿದವರು ಯಾರು ಎಂದು ಉಲ್ಲೇಖಿಸುವ ಸಾಹಸ ಮಾಡಿಲ್ಲವಾದ್ದರಿಂದ  TTD ಎಂದೇ ಉಲ್ಲೇಖಿಸುವುದು ಉಚಿತ ಎಂದು ಭಾವಿಸುತ್ತೇನೆ 

[3] ರಾಮಾಯಣಗಳು ಹಲವು ಅವುಗಳಿಗೆಲ್ಲ  ಮೂಲವಾಗಿ ಉಪಲಬ್ಧವಿರುವ ರಾಮಾಯಣ ವಾಲ್ಮೀಕಿರಾಮಾಯಣ. ಎಂಬ ನಿರ್ಣಯ ಬಹಳ ಮುಖ್ಯ. ಇಲ್ಲದೇ ಹೋದಲ್ಲಿ ಅನಂತರ ಕಾಲದ ಎಲ್ಲ ರಾಮಾಯಣಗಳನ್ನೂ ನಾವು ಸುಮ್ಮನೆ ರಾಮಾಯಣ ಎಂಬ ಹೆಸರಿನಿಂದಲೇ ಪ್ರಾಮಾಣಿಕ ಎಂದು ಭಾವಿಸಿದರೆ, ಬಹಳ ಅನರ್ಥವಿದೆ. ಯಾವ ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತ, ಮೊದಲಾದ ವಾಲ್ಮೀಕಿರಾಮಾಯಣದ ಪಾತ್ರಗಳನ್ನು ಆದರ್ಶವಾಗಿ ಭಾವಿಸಿದ್ದೇವೋ ಅದೆಲ್ಲ ತಲೆಕೆಳಗಾಗುವ ಪ್ರಸಂಗ ಬಂದೀತು. ಆದ್ದರಿಂದ ಆಧುನಿಕ ಸಾಹಿತ್ಯಗಳನ್ನು ವೇದ, ರಾಮಾಯಣ, ಮಹಾಭಾರತ, ೧೮ ಮಹಾಪುರಾಣ, ಇವುಗಳಿಗೆ ವಿರೋಧವಿಲ್ಲದ ಪಕ್ಷದಲ್ಲಿ ಪ್ರಮಾಣ ಎಂದು ಸ್ವೀಕರಿಸಬಹುದು. ಹಾಗಲ್ಲದೇ, ಎಲ್ಲವನ್ನೂ ಪ್ರಮಾಣವೆನ್ನುವುದಾದರೆ ಸಂಸ್ಕೃತ ಬಲ್ಲವರೆಲ್ಲರೂ ರಚಿಸಿದ ಶ್ಲೋಕಗಳೆಲ್ಲ, ಅಥವಾ ಬೇರೆ ಭಾಷೆಯ ಸಾಹಿತ್ಯಗಳೆಲ್ಲ ಪ್ರಮಾಣವಾದಲ್ಲಿ ಭಾರತೀಯ ಸನಾತನ ಸಂಸ್ಕೃತಿಯೇ ಅಪಾಯಕ್ಕೆ ಸಿಲುಕುವುದರಲ್ಲಿ ಸಂದೇಹವಿಲ್ಲ.

[4] अप्सराप्सरसां श्रेष्ठा विख्याता पुञ्जिकस्थला | अञ्जनेति परिख्याता पत्नी केसरिणो हरेः || || अभिशापादभूत्तात वानरी कामरूपिणी | दुहिता वानरेन्द्रस्य कुञ्जरस्य महात्मनः || || कपित्वे चारुसर्वाङ्गी कदा चित्कामरूपिणी | मानुषं विग्रहं कृत्वा यौवनोत्तमशालिनी || १०|| अचरत्पर्वतस्याग्रे प्रावृडम्बुदसंनिभे | विचित्रमाल्याभरणा महार्हक्षौमवासिनी || ११|| तस्या वस्त्रं विशालाक्ष्याः पीतं रक्तदशं शुभम् | स्थितायाः पर्वतस्याग्रे मारुतोऽपहरच्छनैः || १२|| स ददर्श ततस्तस्या वृत्तावूरू सुसंहतौ | स्तनौ च पीनौ सहितौ सुजातं चारु चाननम् || १३|| तां विशालायतश्रोणीं तनुमध्यां यशस्विनीम् | दृष्ट्वैव शुभसर्वाग्नीं पवनः काममोहितः || १४|| स तां भुजाभ्यां पीनाभ्यां पर्यष्वजत मारुतः | मन्मथाविष्टसर्वाङ्गो गतात्मा तामनिन्दिताम् || १५|| सा तु तत्रैव सम्भ्रान्ता सुवृत्ता वाक्यमब्रवीत् | एकपत्नीव्रतमिदं को नाशयितुमिच्छति || १६|| अञ्जनाया वचः श्रुत्वा मारुतः प्रत्यभाषत | न त्वां हिंसामि सुश्रोणि मा भूत्ते सुभगे भयम् || १७||

मनसास्मि गतो यत्त्वां परिष्वज्य यशस्विनि | वीर्यवान्बुद्धिसम्पन्नः पुत्रस्तव भविष्यति || १८|| अभ्युत्थितं ततः सूर्यं बालो दृष्ट्वा महावने |

फलं चेति जिघृक्षुस्त्वमुत्प्लुत्याभ्यपतो दिवम् || १९|| शतानि त्रीणि गत्वाथ योजनानां महाकपे | तेजसा तस्य निर्धूतो न विषादं ततो गतः || २०|| तावदापततस्तूर्णमन्तरिक्षं महाकपे | क्षिप्तमिन्द्रेण ते वज्रं क्रोधाविष्टेन धीमता || २१|| ततः शैलाग्रशिखरे वामो हनुरभज्यत |

ततो हि नामधेयं ते हनुमानिति कीर्त्यते || २२|| ततस्त्वां निहतं दृष्ट्वा वायुर्गन्धवहः स्वयम् | त्रैलोक्ये भृशसङ्क्रुद्धो न ववौ वै प्रभञ्जनः || २३|| सम्भ्रान्ताश्च सुराः सर्वे त्रैलोक्ये क्षुभिते सति | प्रसादयन्ति सङ्क्रुद्धं मारुतं भुवनेश्वराः || २४|| प्रसादिते च पवने ब्रह्मा तुभ्यं वरं ददौ | अशस्त्रवध्यतां तात समरे सत्यविक्रम || २५|| वज्रस्य च निपातेन विरुजं त्वां समीक्ष्य च | सहस्रनेत्रः प्रीतात्मा ददौ ते वरमुत्तमम् || २६|| स्वच्छन्दतश्च मरणं ते भूयादिति वै प्रभो | स त्वं केसरिणः पुत्रः क्षेत्रजो भीमविक्रमः || २७|| मारुतस्यौरसः पुत्रस्तेजसा चापि तत्समः | त्वं हि वायुसुतो वत्स प्लवने चापि तत्समः || २८|| वयमद्य गतप्राणा भवानस्मासु साम्प्रतम् | दाक्ष्यविक्रमसम्पन्नः पक्षिराज इवापरः || २९|| त्रिविक्रमे मया तात सशैलवनकानना | त्रिः सप्तकृत्वः पृथिवी परिक्रान्ता प्रदक्षिणम् || ३०|| तदा चौषधयोऽस्माभिः सञ्चिता देवशासनात् | निष्पन्नममृतं याभिस्तदासीन्नो महद्बलम् || ३१|| स इदानीमहं वृद्धः परिहीनपराक्रमः | साम्प्रतं कालमस्माकं भवान्सर्वगुणान्वितः || ३२|| तद्विजृम्भस्व विक्रान्तः प्लवताम् उत्तमो ह्यसि | त्वद्वीर्यं द्रष्टुकामेयं सर्वा वानरवाहिनी || ३३|| उत्तिष्ठ हरिशार्दूल लङ्घयस्व महार्णवम् | परा हि सर्वभूतानां हनुमन्या गतिस्तव || ३४|| विषाण्णा हरयः सर्वे हनुमन्किमुपेक्षसे |

विक्रमस्व महावेगो विष्णुस्त्रीन्विक्रमानिव || ३५|| ततस्तु वै जाम्बवताभिचोदितः प्रतीतवेगः पवनात्मजः कपिः | प्रहर्षयंस्तां हरिवीर वाहिनीं चकार रूपं महदात्मनस्तदा || ३६||  रामायण. किष्कि. ६६ सर्ग:

[5] माल्यवान्नाम वैदेहि गिरीणामुत्तमो गिरि:  ततो गच्छति गोकर्णं पर्वतं केसरी हरि: देवर्षिभिर्दिष्ट: पिता मम  महाकपि:

तीर्थे नदीपते: पुण्ये शम्बसादनमुद्धरत् तस्याहं हरिण:क्षेत्रे जातो वातेन मैथिलि    सु. का. ३५ सर्ग. ८०-८३

अहं केसरिणः क्षेत्रे वायुना जगदायुषा। जातः कमलपत्राक्ष हनूमान्नाम वानरः॥  म.भा वन -147-27

[6] एकस्मिन् समये शम्भुरद्भुतोतिकर: प्रभु: । ददर्श मोहिनी रूपम् विष्णोस्सहि वसद्गुण: ॥ ३॥ 

चक्रे स्वं क्षुभितं शम्भु: कामबाणहतो यथा । स्वं  वीर्यं पातयामास रामकार्यार्थमादरात् ॥ ४॥

तैर्गौतमसुतायां तद्वीर्यं शम्भो: महर्षिभि: । कर्णद्वारा तथाञ्जन्यां रामकार्यार्थमाहितम् ॥ ५ ॥

ततश्च समये तस्माद्धनूमानिति नामभाक् । शम्भुर्जज्ञे कपितनु: महाबलपराक्रम: ॥ ६ ॥ शिव पु शतरुद्र अ २०.

 

[7] ಮುಂದಿನ ಭಾಗದಲ್ಲಿ ಇದೇ ಶ್ಲೋಕವನ್ನು ಪಾದವ್ಯತ್ಯಾಸದಿಂದ ಉಲ್ಲೇಖಿಸಿದ್ದಾರೆ. ಇಂತಹಾ ಸೂಕ್ಷ್ಮ ವಿಚಾರ ಮಾಡುವಾಗ ಅತ್ಯಂತ ಜವಾಬ್ದಾರಿಯನ್ನು ಹೊಂದಿರುವ TTD ಯು ಪ್ರಮಾಣ ಶ್ಲೋಕಗಳ ಉಲ್ಲೇಖವನ್ನು ಬಹಳ ಎಚ್ಚರ ವಹಿಸಿ ಮಾಡಬೇಕು. 

[8] ಇದೇ ಪ್ರಸಂಗವನ್ನು ವರ್ಣಿಸುವ ಭವಿಷ್ಯೋತ್ತರ ಪುರಾಣದ ವೇಂಕಟೇಶಮಾಹಾತ್ಮ್ಯ  ದಲ್ಲಿ   ಶಿವತೇಜಸ್ಸಿನ ಪ್ರಸಕ್ತಿಯೇ ಇಲ್ಲ. ಅಲ್ಲದೇ ಇಲ್ಲಿ ಶ್ರೀವೇಂಕಟಗಿರಿಯ ಪ್ರಸಕ್ತಿಯೂ ಇಲ್ಲ.

फलमाहृत्य भक्ष्यार्थं प्रत्यहं ह्यददान्मरुत् ॥ ७७ ॥ अथैकस्मिन् दिने वायु: फले वीर्यमपूरयत् ॥  अञ्जना व्रतमास्थाय पुत्रं प्राप गिरीश्वरे ॥  तस्मादञ्जनशैलोऽयं लोके विख्यातकीर्तिमान् ॥ ८१ ॥ श्री भविष्योत्तरपुराणे. श्री वेंकटाचलमाहात्म्यम् अ.

[9]  AJTA ಪುಟ ಸಂಖ್ಯೆ .

[10] कृते वृषाद्रिं वक्ष्यन्ति त्रेतायामंजनाचलम् । द्वापरे शेषशैलेति कलौ श्रीवेंकटाचलम् ॥  नामानि युगभेदेन शैलस्यास्य भवन्ति हि ।

चतुर्युगे त्वया प्रॊक्तं नाम यद्यद्गिरेर्मुने । तस्य तस्य च वै हेतुं विस्तराद्वद मे गुरो । कृते वृषाचल इति कथं नाम भविष्यति ॥

श्री भविष्योत्तरपुराणे. श्री वेंकटाचलमाहात्म्यम् अ. - ३६ त: ३८

[11] वरं ययाचे वृषभ: शैलो मदभिधोऽस्त्विति ॥ ६४॥ श्री भविष्योत्तरपुराणे. श्री वेंकटाचलमाहात्म्यम् अ.

[12] कथमञ्जनशैलेति त्रेतायां नाम मे वद ॥ ६६ ॥ श्री भविष्योत्तरपुराणे. श्री वेंकटाचलमाहात्म्यम् अ.

[13] ಮತಂಗ ಮುನಿಗಳ ಮಾತಿನಂತೆ ಈ ಪರ್ವತದಲ್ಲೇ ಸ್ವಾಮಿಪುಷ್ಕರಿಣೀ, ಮತ್ತು ಆಕಾಶಗಂಗೆ ಇರೋದು.      
    
ಎನ್ನುತ್ತದೆ AJTA.  ಪುಟ ಸಂಖ್ಯೆ ೧೩.

इतो दक्षिणदिग्भागे  दशयोजनदूरत: घनाचल इति ख्यातो नृसिंहस्य निवासभू: तस्योपरि महाभागे ब्रह्मतीर्थं मनोरमे तस्यापि पूर्वदिग्भागे दशयोजनमात्रत: सुवर्णमुखरी नाम नदीनां प्रवरा नदी तस्या एवोत्तरे भागे वृषभाचलनामत: तस्याग्रे सरसी नाम्ना स्वामिपुष्करिणी शुभा गत्वा दृष्ट्वा शुभं तोयं मन:शुद्धिं गमिष्यसि

तत्र स्नात्वा विधानेन वराहं तं प्रणम्य वेङ्कटेशं  नमस्कृत्य ततो गच्छ वरानने वेंकटाचलमाहात्म्यम् स्कांदपुराणं वैष्णवखण्ड: .३८

ಆದರೆ ಮತಂಗ ಮುನಿಗಳ ಮಾತನ್ನು ಭವಿಷ್ಯೋತ್ತರ ಪುರಾಣದ ವೇಂಕಟೇಶಮಾಹಾತ್ಮ್ಯ  ದಲ್ಲಿ ರೀತಿ ಕಾಣುತ್ತೇವೆ. ಇಲ್ಲಿ    वेङ्कटेशं  नमस्कृत्य ततो गच्छ वरानने ಎಂಬ  ಮಾತು ಇಲ್ಲ

पम्पाया: पूर्वदिग्भागे पञ्चाशद्योजनान्तरे । नरसींहाश्रमं देवि ! वर्तते वसुधातले ॥ ७० ॥ तस्य दक्षिणदिग्भागे नारायणगिरेस्तटे ।

उत्तरे स्वामितीर्थस्य वर्तते क्रोशमात्रके ॥ ७१ ॥ वियद्गङ्गेति विख्याता तत्र गच्छ यथासुखं ॥ तत्र स्नात्वाथ कल्याणि ! द्वादशाब्दं तपश्चर ॥ ७२ ॥ तेन पुण्येन ते पुत्रो भविष्यति गुणाधिक: ॥  मतङ्गेनैवमुक्ता सा नारायणगिरिं ययौ ॥७३ ॥ फलमाहृत्य भक्ष्यार्थं प्रत्यहं ह्यददान्मरुत् ॥ ७७ ॥ श्री भविष्योत्तरपुराणे. श्री वेंकटाचलमाहात्म्यम् अ.

[14] द्वापरे शेषशैलेति कथं ख्यातिर्भविष्यति ॥ ८२ ॥ श्री भविष्योत्तरपुराणे. श्री वेंकटाचलमाहात्म्यम् अ.

[15] अत्रैवोत्तरदिग्भागे पर्वतं मेरुनन्दनम् ॥ स्वकायरज्जुना बद्ध्वा बलं ते यावदस्ति हि ॥ १०५ ॥ .... स्वकायरज्जुना बद्ध्नन् आनन्दाद्रिमहीश्वर: ॥ १०७ ॥ श्री भविष्योत्तरपुराणे. श्री वेंकटाचलमाहात्म्यम् अ.

[16] स्वर्णमुख्या महानद्या: प्रतीरे च तथोत्तरे ॥ स्थापयामास राजेन्द्र! गिरिराजं सपन्नगम् ॥ ११८ ॥ हरे: सञ्चोदनेनैव जात: स्वाऽवासहेतवे ॥  व्याजेनैव त्वयाऽनीत: तेन स्वर्णमुखीतटम् ॥ १२० ॥  इत्थं शेषांशजं शैलं शेषेण परिवेष्टितम् ॥ १२६ ॥

श्री भविष्योत्तरपुराणे. श्री वेंकटाचलमाहात्म्यम् अ.

[17] स्वावासहेतोर्हरिणा वाहितं वायुना छलात् ॥  राजन् शेषनिमित्तेन शेषाचलमिमं  विदु: ॥ १२७ ॥ श्री भविष्योत्तरपुराणे. श्री वेंकटाचलमाहात्म्यम् अ.

[18] कलौ वेङ्कटशैलेति कथं नाम महामुने ॥ १२८ ॥ श्री भविष्योत्तरपुराणे. श्री वेंकटाचलमाहात्म्यम् अ.

[19] यदा गता महालक्ष्मी: तदा नारायणो हरि: ॥ आविंशतितमे  (अष्टाविंशतिमे ) प्राप्ते  द्वापरान्ते कलौ युगे ॥ ३७ ॥ मायावी परमानन्दं त्यक्त्वा वैकुण्ठमुत्तमम् ॥ गङ्गाया दक्षिणे देशे योजनानां शतत्रये ॥ ४० ॥ सुवर्णमुखरी नाम नदीनां प्रवरा नदी ॥

शुकस्य वरदा पुण्या ह्यगस्त्यमुनिपूजिता ॥ ४१ ॥ तस्या एवोत्तरे तीरे क्रोशार्धद्वयमात्रके ॥ श्रीवेङ्कटगिरिर्नाम वर्तते पुण्यकानन: ॥ ४२ ॥ सुवर्णगिरिपुत्रस्तु सर्वतीर्थसमन्वित: ॥ साक्षाच्छेषावतारोऽसौ सर्वधातुविराजित: ॥ ४३ ॥ वैकुण्ठसदृशो दिव्यो नारायणसमाश्रय: ॥

शेषमारुतसंवादादागत:पुण्यकानन: ॥ ४४ ॥ श्री भविष्योत्तरपुराणे. श्री वेंकटाचलमाहात्म्यम् अ.

[20] तेषामनुपदं राजन् ! प्राप शेषगिरिञ्च स: ॥  विश्राम्यन्त: सर्व एव ते तस्थुस्तत्र तत्र च ॥ २०६ ॥ सोऽपि तस्थौ महाराज! माधवो गिरिमस्तके ॥  भूधरस्पर्शमात्रेण तदघं पर्यकम्पत ॥ २०७ ॥ तदा नाम चकाराद्रे: "वेङ्कटाचल" इत्यपि ॥  सर्वपापानि वें  प्राहु: कट:तद्दाह इत्यपि  ॥ २२० ॥ श्री भविष्योत्तरपुराणे. श्री वेंकटाचलमाहात्म्यम् अ.

[21] श्रीवेङ्कटगिरौ सप्त साहस्रं वत्सरान् पुन:  ब्रह्माण्ड.पु. वेङ्कटाचलमाहात्म्यम् तीर्थखण्ड. अ. ५- १७ AJTA.  ಪುಟ ಸಂಖ್ಯೆ

 अञ्जने त्वं हि शेषाद्रौ तपस्तप्त्वा सुदारुणम् ॥ ब्रह्माण्ड.पु. वेङ्कटाचलमाहात्म्यम् तीर्थखण्ड. अ. ५-६४ AJTA.  ಪುಟ ಸಂಖ್ಯೆ

[22] वेङ्कटेशं  नमस्कृत्य ततो गच्छ वरानने । वेंकटाचलमाहात्म्यम् स्कांदपुराणं वैष्णवखण्ड: .३८  AJTA.  ಪುಟ ಸಂಖ್ಯೆ ೧೩.

[23] सुवर्णमुखरी नाम नदीनां प्रवरा नदी तस्या एवोत्तरे भागे वृषभाचलनामत: वेंकटाचलमाहात्म्यम् स्कांदपुराणं वैष्णवखण्ड: .३८  AJTA.  ಪುಟ ಸಂಖ್ಯೆ ೧೩

[24] मत्वेदं परमं स्थानं तत्र लीनोऽभवद्धरि: ॥ एवं देवे स्थिते तत्र विगतं वत्सरायुतम् ॥१४ ॥ अतीते द्वापरे चैव त्वष्टाविंशतिमे कलौ ॥ अतीते वत्सरे कश्चित् चोलरजो नृपोत्तम: ॥ १५ ॥ श्री भविष्योत्तरपुराणे. श्री वेंकटाचलमाहात्म्यम् अ.

सुवर्णमुखरी नाम नदीनां प्रवरा नदी ॥  शुकस्य वरदा पुण्या ह्यगस्त्यमुनिपूजिता ॥ ४१ ॥ तस्या एवोत्तरे तीरे क्रोशार्धद्वयमात्रके ॥ श्रीवेङ्कटगिरिर्नाम वर्तते पुण्यकानन: ॥ ४२ ॥ सुवर्णगिरिपुत्रस्तु सर्वतीर्थसमन्वित: ॥साक्षाच्छेषावतारोऽसौ सर्वधातुविराजित: ॥ ४३ ॥ वैकुण्ठसदृशो दिव्यो नारायणसमाश्रय: ॥ शेषमारुतसंवादादागत:पुण्यकानन: ॥ ४४ ॥ योजनत्रयविस्तीर्ण: त्रिंशद्योजनमायत: ॥

वदनं वेङ्कटगिरि: नृसिंहाद्रिश्च मध्यम: ॥ ४५ ॥ श्रीशैल: पुच्छभागस्थ: सर्वक्षेत्रमयोगिरि: ॥ एवं प्रभावोऽस्य गिरीन्द्रजन्मन:  श्रीवेङ्कटाद्रेस्तु हरेस्तथैव ॥ जानन्ति न ब्रह्मशिवेन्द्रपूर्वका: अत्यल्पवीर्या: मनुजास्तु किं पुन: ॥ ५४ ॥

[25] योजनत्रयविस्तीर्ण: त्रिंशद्योजनमायत: ॥ वदनं वेङ्कटगिरि: नृसिंहाद्रिश्च मध्यम: ॥ ४५ ॥ श्रीशैल: पुच्छभागस्थ: सर्वक्षेत्रमयोगिरि: ॥

एवं प्रभावोऽस्य गिरीन्द्रजन्मन:  श्रीवेङ्कटाद्रेस्तु हरेस्तथैव ॥ जानन्ति न ब्रह्मशिवेन्द्रपूर्वका: अत्यल्पवीर्या: मनुजास्तु किं पुन: ॥ ५४ ॥ श्री भविष्योत्तरपुराणे. श्री वेंकटाचलमाहात्म्यम् अ.

 

Popular posts from this blog

ಬ್ರಾಹ್ಮಣ್ಯ ಮತ್ತು ಭಾರತ