ಕೊರೋನಾ ಪರೀಕ್ಷೆ

 ಕರೋನಾ ಹಿನ್ನೆಲೆಯಲ್ಲಿ ಇದೀಗ ಮತ್ತೆ ಪ್ರಾರಂಭವಾದ ಚರ್ಚೆ ಇದು. ಈ ಶೈಕ್ಷಿಕವರ್ಷದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬೇಕೋ ಬೇಡವೋ ? ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವ ಹಾಗೆ.  

ಪರೀಕ್ಷೆ ಮಾಡುವುದಾದರೆ, ಯಾವ ರೀತಿಯ ಪರೀಕ್ಷೆ ಉಚಿತ, ಆನ್ಲೈನ್ ಅಥವಾ ಆಫ್ಲೈನ್ ? ಈ ಹಿನ್ನೆಲೆಯಲ್ಲಿ ಕೆಲವು ವಿಚಾರಗಳು.

೧. ಪ್ರಾಯ: ಕರೋನಾ ಹಿನ್ನೆಲೆಯಲ್ಲಿ ಉಳಿದ ಕ್ಷೇತ್ರಗಳ- ಕುರಿತಾಗಿ ಯಾವ ರೀತಿ ಗಂಭೀರ ಚಿಂತನೆ ನಡೆದಿದೆಯೋ ಆ ರೀತಿಯ ಗಂಭೀರ ಚಿಂತನೆ ಶಿಕ್ಷಣ ಕ್ಷೇತ್ರದ ಕುರಿತು ನಡೆದಿಲ್ಲ. ತಮಗೆ ತೋರಿದಂತೆ ಆಯಾ ಶಿಕ್ಷಣಸಂಸ್ಥೆಗಳು ಕೆಲವು ಉಪಾಯಗಳನ್ನು ಕೈಗೊಂಡಿವೆ. ಕೆಲವೆಡೆ ಭಾಗಶ: ಆನ್ಲೈನ್ ಶಿಕ್ಷಣ ನಡೆದರೆ ಮತ್ತೆ ಕೆಲವೆಡೆ ಆಫ್ಲೈನ್ ಶಿಕ್ಷಣ ನಡೆದಿದೆ. ಇಂತಹ ಶಿಕ್ಷಣ ಪ್ರಕ್ರಿಯೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿದ ಅಧ್ಯಾಪಕರು ಎಷ್ಟೋ ವಿದ್ಯಾರ್ಥಿಗಳೆಷ್ಟೋ  ದೇವರೇ ಬಲ್ಲ.  

೨. ವಸ್ತುತ: ಈ ಶೈಕ್ಷಣಿಕ ವರ್ಷ ಕಳೆದ ವರ್ಷಕ್ಕೆ ಹೋಲಿಸಿದರೆ ಶಿಕ್ಷಣ ದೃಷ್ಟಿಯಿಂದ ಬಹಳಷ್ಟು ಶೋಚನೀಯವಾಗಿದೆ. ಕಾರಣ ಕಳೆದ ವರ್ಷ ಶೈಕ್ಷಣಿಕ ವರ್ಷದ ಅಂತ್ಯಕ್ಕೆ ಕೋರೋನಾ ಆಕ್ರಮಣವಾಗಿತ್ತು. ಆದ್ದರಿಂದ ಶಿಕ್ಷಣ ದೃಷ್ಟಿಯಿಂದ ಕಳೆದ ವರ್ಷ ಈ ವರ್ಷಕ್ಕಿಂತ ಉತ್ತಮವಾಗಿತ್ತು.

೩. ಆದ್ದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಶಿಕ್ಷಣ ಬಹಳ ದುರ್ಬಲ ಮಾತ್ರವಲ್ಲ, ಎಲ್ಲ ವಿದ್ಯಾರ್ಥಿಗಳೂ ಸಂಪೂರ್ಣವಾಗಿ ಶಿಕ್ಷಣವನ್ನು ಪಡೆಯುವಲ್ಲಿ ಸಫಲರಾಗಿಲ್ಲ. ಇದನ್ನು ಶಿಕ್ಷಣವ್ಯವಸ್ಥೆಯ ಬಹುದೊಡ್ಡ ಕೊರತೆಯನ್ನಾಗಿ ಪರಿಗಣಿಸಬೇಕು. 

೪. ವ್ಯಾಕ್ಸಿನೇಷನ್ ಆರಂಭವಾಗಿರುವುದು ಈ ಮಾಸದಲ್ಲಿ ಆದ್ದರಿಂದ ಸಂಪೂರ್ಣ(೯೦% ) ವ್ಯಾಕ್ಸಿನೇಷನ್ ಸಾಧಿಸಲು ಕನಿಷ್ಟ ಪಕ್ಷ ಒಂದು ವರ್ಷ ಬೇಕು. 

೫. ಈ  ಸಂದರ್ಭದಲ್ಲಿ ಪರೀಕ್ಷೆಗಳ ನಿರ್ವಹಣೆ ವಿಷಯದಲ್ಲಿ ಗಂಭೀರವಾದ ಚಿಂತನೆಯ ಅಗತ್ಯವಿದೆ. ಆ ಚಿಂತನೆ ಇಡೀ ವರ್ಷದ ಶಿಕ್ಷಣಪ್ರಕ್ರಿಯೆಯನ್ನು ಗಮನಿಸಿ ಮಾಡಬೇಕು.

೬. ಕೇವಲ ಪ್ರೋತ್ಸಾಹದ, ಹುರಿದುಂಬಿಸುವ ಮಾತುಗಳಿಂದ ಬಲವಂತವಾಗಿ  ಪರೀಕ್ಷೆಗಳನ್ನು ನಡೆಸುವಲ್ಲಿ ಪರೀಕ್ಷಾನಿರ್ವಹಣಾ ಸಂಸ್ಥೆಗಳು ಯಶಸ್ಸನ್ನು ಕಂಡರೂ ಇದರಿಂದ  ವಿದ್ಯಾರ್ಥಿಗಳ ಮೇಲೆ ವಿಪರೀತ ಪರಿಣಾಮವಾಗುವುದರಲ್ಲಿ ಸಂದೇಹವಿಲ್ಲ.

೭. ವಸ್ತುತ: ದೇಶವ್ಯಾಪಿಯಾಗಿ ಇರುವ ವಿದ್ಯಾರ್ಥಿಗಳ ಕುರಿತು  ಆಲೋಚನೆ ಮಾಡುವ ಅಗತ್ಯ ಇದೆ. ಕೇವಲ ಮುಂದುವರೆದ ಪಟ್ಟಣದ ವಿದ್ಯಾರ್ಥಿಗಳ ಹಿತಚಿಂತಕರಾಗಿ ಮಾತನಾಡದೇ, ಸಮಷ್ಟಿಯಾದ ಆಲೋಚನೆಯನ್ನು ಮಾಡಬೇಕು. 

೮. ಅದರಲ್ಲೂ ೧೦ ಮತ್ತು ೧೨ ನೇ ತರಗತಿಯ ವಿದ್ಯಾರ್ಥಿಗಳು ಹಲವು ಲಕ್ಷಸಂಖ್ಯೆಯಲ್ಲಿ ಹಳ್ಳಿಗರೇ ಆಗಿದ್ದಾರೆ ಎಂಬುದು ಗಮನೀಯ ಅಂಶ. ಈ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸುವ ಚಿಂತನೆ ಇದ್ದಲ್ಲಿ,  ಈ ವರ್ಷ ಎಲ್ಲ ಪ್ರದೇಶದ ವಿದ್ಯಾರ್ಥಿಗಳಿಗೆ ಸಮಾನವಾಗಿ ಶಿಕ್ಷಣ ದೊರೆತಿರುವುದೋ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು.

೯. ಪರೀಕ್ಷೆಗಳನ್ನು ಮುಂದೂಡುವ ಆಲೋಚನೆ ಇದ್ದಲ್ಲಿ , ಎಷ್ಟು ಸಮಯದವರೆಗೆ ಮುಂದೂಡುವದು? ಅದರಿಂದ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ವರ್ಷವೇ ನಾಶ ಆಗುವ ಸಾಧ್ಯತೆ ಇದೆ. 

೧೦. ಮುಂದಿನ ವರ್ಷಕ್ಕೆ ನಾವು ಸಂಪೂರ್ಣವಾಗಿ ಕೊರೋನಾ ಮುಕ್ತರಾಗುತ್ತೇವೆ ಎನ್ನುವ ಖಚಿತ ಸಂಕಲ್ಪ ನಮಗಿದೆಯೇ? 

೧೧. ಸರಕಾರಗಳು ತಮಗಿಷ್ಟಬಂದಂತೆ ನಿರ್ಣಯ ಮಾಡುತ್ತಾ, ಚುಣಾವಣೆ ನಡೆಸಿ, ರಾಲಿ ಗಳನ್ನು ಮಾಡಿ, ಸಭೆ ಸಮಾರಂಭಗಳನ್ನು ಮಾಡಿ, ಮುಕ್ತ ವ್ಯಾಪಾರಕ್ಕೆ ಅನುವು ಮಾಡಿ, ಚಿತ್ರಮಂದಿರ, ಹೋಟೆಲ್, ಇತ್ಯಾದಿ ಎಲ್ಲ ಸಾರ್ವಜನಿಕ ಕ್ಷೇತ್ರಗಳನ್ನು ಮುಕ್ತಗೊಳಿಸಿ ಶಿಕ್ಷಣಕ್ಷೇತ್ರವೊಂದನ್ನು ಕುರಿತು ಆಲೋಚನೆ ಮಾಡಲೇ ಇಲ್ಲ. ಇದೀಗ ಧಿಡೀರನೇ ಪರೀಕ್ಷೆ ನಡೆಸಬೇಕೋ ಬೇಡವೋ ಎಂದು ಜಾಣ ಕುರುಡುತನವನ್ನು ತೋರುತ್ತಿದೆ. ಮತ್ತೊಮ್ಮೆ ವಿದ್ಯಾರ್ಥಿಸಮುದಾಯವನ್ನು ಮೂರ್ಖರನ್ನಾಗಿಸುವ ಪ್ರಯತ್ನ ಇದು, ಹೊರತು ಬೇರೇನೂ ಅಲ್ಲ. 

೧೨. ಯಾವ ಸರಕಾರ ತನ್ನ ಯಾವ ಶಿಕ್ಷಣಸಂಸ್ಥೆಗೆ ಹೆಚ್ಚಿನ ಹಣ ಬಿಡುಗಡೆ ಮಾಡಿ ಆನ್ಲೈನ್ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟಿದೆ. ಎಷ್ಟು ಹಳ್ಳಿಗಳಲ್ಲಿ  ೨೪x೭ ವೈಫೈ ಸೌಲಭ್ಯವನ್ನು ಕಲ್ಪಿಸಿದೆ. ಇದಾವ ಆಲೋಚನೆಗಳಿಲ್ಲದೇ ವಿದ್ಯಾರ್ಥಿಗಳ ಜೀವನದ ಜೊತೆ ಆಟವಾಡೋದು ಸರಿಯಲ್ಲ. ಈ ಒಂದು ವರ್ಷ ಎಲ್ಲ ವಿದ್ಯಾರ್ಥಿಗಳಿಗೂ ಆನ್ಲೈನ್ ಕ್ಲಾಸಿಗಾಗಿ BSNL ಫ್ರೀ ವೈಫೈ ನೀಡಬಹುದಿತ್ತು. 

ಹೋಗ್ಲಿ ಬಿಡಿ ಈಗ ಇದರ ಕುರಿತು ಮಾತಾಡಿ ಪ್ರಯೋಜನವಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ವ್ಯರ್ಥವಾಗದಂತೆ, ಮತ್ತು ಅವರಿಗೆ ಪರೀಕ್ಷಾ ಪದ್ಧತಿ ಹೊರೆಯಾಗದಂತೆ ಈ ಶೈಕ್ಷಣಿಕ ವರ್ಷವನ್ನು ಕೊನೆಗೊಳಿಸಿ, ಮುಂದಿನ ಶೈಕ್ಷಿಕ ವರ್ಷದಲ್ಲಿ ಈ ವರ್ಷದಲ್ಲಾದ ಹಾನಿಯನ್ನು ತುಂಬಿಸುವುದರ ಜೊತೆಗೆ, ದೇಶದಾದ್ಯಂತ ಏಕರೂಪವಾದ ಪರಿಷ್ಕೃತ ಶಿಕ್ಷಣದ ಕುರಿತು, ಪರೀಕ್ಷಾಪದ್ಧತಿಯ ಕುರಿತು  ಈಗಲೇ ಚಿಂತನೆ ನಡೆಸಬೇಕು. ಅದಕ್ಕೆ ವಿದ್ಯಾರ್ಥಿಗಳುಈಗಲೇ ಮಾನಸಿಕವಾಗಿ ಸಿದ್ಧರಾಗುವಂತೆ ತರಬೇತು ಗೊಳಿಸಬೇಕು.

Popular posts from this blog

ಬ್ರಾಹ್ಮಣ್ಯ ಮತ್ತು ಭಾರತ